ಹಳಿಯಾಳ: ಜೈನ ಮುನಿ ಆಚಾರ್ಯ ಶ್ರೀ 108 ವಿಶುದ್ಧ ಸಾಗರ ಮಹಾರಾಜರ ನೇತೃತ್ವದಲ್ಲಿ ಆಚಾರ್ಯ ವಿರಾಗಸಾಗರ ಮುನಿ ಮಹಾರಾಜರೊಂದಿಗೆ 21 ಮುನಿಗಳು ತಾಲೂಕಿನ ಹವಗಿ ಹಾಗೂ ತೇರಗಾಂವ ಗ್ರಾಮದ ಜೈನ ಬಸದಿಗೆ ಬುಧವಾರ ಭೇಟಿ ನೀಡಿದರು.
ಮುನಿ ಸಂಘವನ್ನು ಕುಂಭ ಮೆರವಣಿಗೆ ಮೂಲಕ ಹವಗಿಯ ಶ್ರೀಪಾರ್ಶ್ವನಾಥ ಜೈನ ಮಂದಿರಕ್ಕೆ ಕರೆತರಲಾಯಿತು. ಸೋಂದೆ ಮಠದ ಶ್ರೀ ಭಟ್ಟಾಕಲಂಕ ಪಟ್ಟಾಚಾರ್ಯ ಭಟ್ಟಾರಕ ಮಹಾಸ್ವಾಮೀಜಿ, ಶ್ರೀ ಲಕ್ಷ್ಮೀ ಸೇನಾ ಭಟ್ಟಾರಕ ಮಹಾ ಸ್ವಾಮೀಜಿ ಮತ್ತು ಶ್ರೀಜಿನಸೆನ ಸೇನಾ ಭಟ್ಟಾರಕ ಮಹಾ ಸ್ವಾಮೀಜಿ ಇದ್ದರು.
ಹವಗಿಯಲ್ಲಿ ವಿಶೇಷ ಪೂಜೆ ಹಾಗೂ ಪ್ರವಚನ ನೆರವೇರಿಸಿದ ಬಳಿಕ ಮುನಿಸಂಘವು ತೇರಗಾಂವ ಗ್ರಾಮಕ್ಕೆ ತೆರಳಿ ಅಲ್ಲಿಯೂ ಪೂಜೆ ಸಲ್ಲಿಸಿ, ನೆರೆದಿದ್ದ ಶ್ರಾವಕ-ಶ್ರಾವಿಕೆಯರನ್ನು ಉದ್ದೇಶಿಸಿ ಪ್ರವಚನ ನೀಡಿದರು. ಬಳಿಕ ಅಳ್ನಾವರಕ್ಕೆ ಪ್ರಯಾಣ ಬೆಳೆಸಿದರು.