ಬೆಳಗಾವಿ: ಜೈನ ಇಂಟರ್‌ನ್ಯಾಷನಲ್ ಟ್ರೇಡ್ ಆರ್ಗನೈಝೇಶನ್ (ಜಿತೋ) ವತಿಯಿಂದ ಆ.27, 28ರಂದು ಕೆಎಲ್‌ಇ ಡಾ.ಬಿ.ಎಸ್.ಜಿರಗೆ ಸಭಾಗಂಣದಲ್ಲಿ ಮೂರನೇ ಆವೃತ್ತಿಯ ಜೈನ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಜಿತೋ ಬೆಳಗಾವಿ ವಿಭಾಗದ ಮುಖ್ಯ ಕಾರ್ಯದರ್ಶಿ ಅಶೋಕ ಕಟಾರಿಯಾ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸ್ಥೆಯ ವತಿಯಿಂದ ಈಗಾಗಲೇ ಎರಡು ಉತ್ಸವಗಳನ್ನು ಬೆಳಗಾವಿಯಲ್ಲಿ ನಡೆಸಲಾಗಿದೆ. ಇದೀಗ ಜಿತೋ ಕೆಕೆಜಿ ವಲಯ ಮತ್ತು ಮಹಾರಾಷ್ಟ್ರ ವಲಯಗಳ ಸಹಯೋಗದಲ್ಲಿ 3ನೇ ಆವೃತ್ತಿ ಆಯೋಜಿಸಲಾಗಿದೆ ಎಂದರು.
ಆ.27ರಂದು ಬೆಳಗ್ಗೆ 11ಕ್ಕೆ ಉದ್ಘಾಟನೆ ನಡೆಯಲಿದೆ. ಜಿತೋ ಅಪೆಕ್ಸ್ ಜೆಬಿಎನ್ ಮುಖ್ಯಸ್ಥ ರಾಜೇಶ ಚಂದನ ಮುಖ್ಯ ಭಾಷಣಕಾರರಾಗಿ ಆಗಮಿಸುವರು. ಬಳಿಕ ಪ್ರೇರಕ ಕತೆಗಾರ ಶಾಂತಿಲಾಲ ಗುಲೆಛಾ ಅವರು ಜೀನವದಲ್ಲಿ ಅತ್ಯುತ್ತಮ ನಡವಳಿಕೆ ಕುರಿತು ಮಾತನಾಡುವರು. ‘ವ್ಯಾಪಾರೀಕರಣದಲ್ಲಿ ಯಾಂತ್ರಿಕತೆ’ ಕುರಿತು ಕಿಶನ್ ಕಾರ್ಯಾಗಾರ ನಡೆಸಿಕೊಡುವರು ಎಂದರು.
ಮಧ್ಯಾಹ್ನ ಜಿತೋ ಜಾಬ್ಸ್ ಯೋಜನೆಯಡಿ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿಕೊಡುವ ಸಮಾವೇಶವಿದ್ದು, ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿವೆ. ಸಂಜೆ ರಿಷಬ್ ಮತ್ತು ಸಂಭವ ಅವರಿಂದ ರಸಮಂಜರಿ ಜರುಗಲಿದೆ ಎಂದರು.
ಆ.28ರಂದು ಬೆಳಗ್ಗೆ ಶಾರ್ಕ್ ಟ್ಯಾಂಕ್ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಡಿ ಹೊಸದಾಗಿ ಪ್ರಾರಂಭಿಸಿದ ಉದ್ಯೋಗಗಳಲ್ಲಿ ಹಣ ಹೂಡುವ ಮೂಲಕ ಯುವ ಉದ್ಯಮಿದಾರರಿಗೆ ಪ್ರೋತ್ಸಾಹ ನೀಡಲಾಗುವುದು. ಈ ರೀತಿ ಪ್ರಯತ್ನ ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ನಡೆಯುತ್ತಿದ್ದು, ಈಗಾಗಲೇ 20ಕ್ಕೂ ಹೆಚ್ಚು ಸ್ಟಾರ್ಟಅಪ್ ಕಂಪನಿಗಳು ನೋಂದಣಿ ಮಾಡಿಕೊಂಡಿವೆ. ಓಂ ಜೈನ್, ಯಶ ರಾಜೇಂದ್ರ, ಅರುಣ ಲಾಲವಾಣಿ, ವಿನೋದ ಜೈನ, ಶಿಖಾ ಹರಣ ಸೇರಿ ವಿವಿಧ ಹೂಡಿಕೆದಾರರು ಭಾಗವಹಿಸುವರು. ಬಳಿಕ ಯುನಿಕಾರ್ನ್ ಸ್ಪೀಕರ್ ಸೌರಭ ಜೈನ ಅವರಿಂದ ಪ್ರೇರಣಾ ಭಾಷಣ ಜರುಗಲಿದೆ. ಸಂಜೆ ರಿಶ್ತೆ ಜೈನ ವಧು-ವರ ಸಮಾವೇಶ, ಮತ್ತು ಜೈನ್ಸ್ ಟ್ಯಾಲೆಂಟ್ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.