ಗದಗ: ಮಾನವನು ಬೌದ್ಧಿಕ ಮತ್ತು ಭೌತಿಕವಾಗಿ ಯಾವುದೇ ಸಾಧನೆಗೈಯಲು ಬ್ರಹ್ಮಚರ್ಯ ವ್ರತದ ಪಾಲನೆ ತುಂಬಾ ಅಗತ್ಯವೆಂದು ಲಕ್ಷ್ಮಣ ಅಂಬೋಜಿ ಹೇಳಿದರು.
ಜಿಲ್ಲಾ ದಿಗಂಬರ ಜೈನ ಸಂಘವು ದಶಲಕ್ಷಣ ಪರ್ವಾಚರಣೆ ಮತ್ತು ಸಮಾಜ ಸಂಪರ್ಕ ಸಭೆ ಕಾರ್ಯಕ್ರಮದ ಪ್ರಯುಕ್ತ ಹುಡ್ಕೋ ಕಾಲೋನಿಯ ಶ್ರೀ ಪ್ರಕಾಶ ಮುತ್ತಿನ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ‘ಉತ್ತಮ ಬ್ರಹ್ಮಚರ್ಯ ಧರ್ಮ’ ಕುರಿತು ಉಪನ್ಯಾಸ ಮಾಡುತ್ತ, ಜೈನ ಧರ್ಮದ ಪಂಚಾಣುವ್ರತಗಳಲ್ಲಿ ‘ಬ್ರಹ್ಮಚರ್ಯ’ಕ್ಕೆ ಶ್ರೇಷ್ಠವಾದ ಸ್ಥಾನ ಕೊಡಲಾಗಿದ್ದು, ಇದನ್ನು ಕಾಯಾ, ವಾಚಾ, ಮನಸಾ ಪಾಲಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಸುಮೇಶ ಕಾಸಾರ ಮತ್ತು ಶ್ರೀಮತಿ ಜ್ವಾಲಾಮಾಲಿನಿ ಸದರಣ್ಣವರ ಅವರು ದಶಲಕ್ಷಣ ಪರ್ವದ ಶ್ರೇಷ್ಠತೆ ಕುರಿತು ಮಾತನಾಡಿದರು. ಸಂಘದ ಅಧ್ಯಕ್ಷರಾದ ಶ್ರೀ ಪಿ.ಎ. ಕುಲಕರ್ಣಿ ಅವರು ಸಂಘವು ಹಮ್ಮಿಕೊಂಡಿರುವ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಿಕ ಚಟುವಟಿಕೆಗಳನ್ನು ಪರಿಚಯಿಸುತ್ತ, ಗದಗ ನಗರದಲ್ಲಿ ದಿಗಂಬರ ಜೈನ ಸಮಾಜವು ಧಾರ್ಮಿಕ-ಸಾಮಾಜಿಕ ಸಭೆ-ಸಮಾರಂಭಗಳನ್ನು ಹಮ್ಮಿಕೊಳ್ಳಲು ಸ್ವಂತ ಕಟ್ಟಡ ಇರುವುದಿಲ್ಲ. ಈ ನಿಟ್ಟಿನಲ್ಲಿ ಮಾನ್ಯ ಕರ್ನಾಟಕ ಸರ್ಕಾರ ಮತ್ತು ಜಿಲ್ಲೆಯ ಸಚಿವರು, ಶಾಸಕರು, ದಾನಿಗಳ ಸಹಾಯ-ಸಹಕಾರವನ್ನು ಅಪೇಕ್ಷಿಸುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇತಿಹಾಸ ಪ್ರಾಧ್ಯಾಪಕ ಡಾ. ಅಪ್ಪಣ್ಣ ಹಂಜೆ ಅವರು “ಜೈನ ಸಮಾಜವು ದಶಲಕ್ಷಣ ಪರ್ವದ ನಿಮಿತ್ಯ ಹಮ್ಮಿಕೊಳ್ಳುವ ಹತ್ತು ದಿನಗಳ ಕಾರ್ಯಕ್ರಮದಲ್ಲಿ ಉತ್ತಮ ಕ್ಷಮಾ, ಮಾರ್ದವ, ಆರ್ಜವ, ಶೌಚ, ಸತ್ಯ, ಸಂಯಮ, ತಪ, ತ್ಯಾಗ, ಆಕಿಂಚನ್ಯ, ಬ್ರಹ್ಮಚರ್ಯ ವ್ರತಗಳ ಕುರಿತು ವಿಶೇಷವಾಗಿ ಚಿಂತನೆ ನಡೆಸುತ್ತದೆ. ಬ್ರಹ್ಮಚರ್ಯ ವ್ರತದ ಪಾಲನೆಯಿಂದ ಮನಸ್ಸಿನ ವಿಕಾರತೆಗಳನ್ನು ದೂರಮಾಡಲು ಸಾಧ್ಯ, ಈ ಹತ್ತು ತತ್ವಗಳು ಸಾಧಕನಿಗೆ ಯಶಸ್ಸಿನ ಸೋಪಾನಗಳಾಗಿದ್ದು, ಇವುಗಳನ್ನು ಪ್ರತಿಯೊಬ್ಬ ವ್ಯಕ್ತಿ ಅಳವಡಿಸಿಕೊಂಡರೆ ಸಮಾಜದಲ್ಲಿ ಭಾವೈಕ್ಯತೆ, ಸಾಮರಸ್ಯ ಸಹಜವಾಗಿ ಮೂಡುತ್ತದೆ. ಪ್ರಾಥಮಿಕ ಅಥವಾ ಪ್ರೌಢಶಾಲಾ ಹಂತದ ಸಮಾಜ ವಿಜ್ಞಾನ ಪಠ್ಯದಲ್ಲಿ ಇವುಗಳನ್ನು ಅಳವಡಿಸುವುದು ಅವಶ್ಯವಿದೆ’ ಎಂದು ಹೇಳಿದರು. ಕಾರ್ಯಕ್ರಮದ ಸಂಘದ ಪದಾಧಿಕಾರಿಗಳು, ಹಿರಿಯರು, ಶ್ರಾವಕರು, ಶ್ರಾವಿಕೆಯರು ಭಾಗವಹಿಸಿದ್ದರು. ಸಂಕಪ್ಪ ನಾವಳ್ಳಿ ಸ್ವಾಗತಿಸಿದರು. ಯಶವಂತ ಸಿದ್ಧಣ್ಣವರ ಕಾರ್ಯಕ್ರಮ ನಿರೂಪಿಸಿದರು. ಎಂ.ಟಿ. ಕಬ್ಬಿಣ ವಂದನಾರ್ಪಣೆಗೈದರು.