ಕಾರವಾರ: ಪಹಣಿಯಲ್ಲಿ ಹೆಸರು ಸೇರಿಸಲು ಲಂಚ ಪಡೆಯುವಾಗ ಸಿಕ್ಕಿ ಬಿದ್ದ ತಹಸೀಲ್ದಾರ್ ಕಚೇರಿಯ ಪ್ರಥಮ ದರ್ಜೆ ಸಹಾಯಕನಿಗೆ 2 ವರ್ಷ ಕಠಿಣ ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಽಸಿ ವಿಶೇಷ ಮತ್ತು ಪ್ರಧಾನ ಜಿಲ್ಲಾ ಸೆಶನ್ಸ್ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಅಂಕೋಲಾ ತಾಲೂಕಿನ ತಹಸೀಲ್ದಾರ್ ಕಚೇರಿಯ ಎಫ್‌ಡಿಸಿ ಶಬ್ಬಿರ್ ಖಾಸಿಮ್ ಶೇಖ್ ಶಿಕ್ಷೆಗೊಳಗಾದವರು. ಬೊಬ್ರುವಾಡದ ಗಣೇಶ ಸೀತಾರಾಮ ನಾಯ್ಕ ಅವರ ಜಮೀನಿನ ಪಹಣಿ ಪತ್ರದ ಕಲಂ 9 ರಲ್ಲಿ ಕರ್ನಾಟಕ ಸರ್ಕಾರದ ಹಕ್ಕು ಕಡಿಮೆ ಮಾಡಿ, ತಾಯಿ ಶಾರದಾ ಸೀತಾರಾಮ ನಾಯ್ಕ ಅವರನ್ನು ವಾರಸುದಾರರನ್ನಾಗಿ ಸೇರಿಸಿ ನಮೂನೆ 10 ಹಕ್ಕು ಪತ್ರ ವಿತರಿಸಲು ಶಬ್ಬಿರ್ ಶೇಖ್ 2500 ರೂ. ಲಂಚ ಕೇಳಿದ್ದರು. 1500 ರೂ. ಲಂಚ ಪಡೆಯುವಾಗ ಲೋಕಾಯುಕ್ತ ಟ್ರಾಪ್ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿದ್ದರು. ಲೋಕಾಯುಕ್ತ ಪೊಲೀಸರು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಡಿ.ಎಸ್.ವಿಜಯಕುಮಾರ್ ತೀರ್ಪು ಪ್ರಕಟಿಸಿದ್ದಾರೆ. ಸಂಸ್ಥೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎ.ಎಂ.ಪ್ರಭು ವಾದ ಮಂಡಿಸಿದ್ದರು ಎಂದು ಲೋಕಾಯುಕ್ತ ಎಸ್‌ಪಿ ಕುಮಾರ್ ಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಪೌರ ಕಾರ್ಮಿಕರ ಜತೆ ಡಿಸಿ, ಎಂಎಲ್ಎ ಸಖತ್ ಸ್ಟೆಪ್