ಜಿಲ್ಲೆ

ಜೈಲು ರಸ್ತೆ ಅಭಿವೃದ್ಧಿ ಕೂಡಿಬಂತು ಕಾಲ

Dakshina Kannada

ಮಂಗಳೂರು: ಸ್ಮಾರ್ಟ್ ಸಿಟಿಯಿಂದ ನಗರದ ಒಳರಸ್ತೆಗಳ ಅಭಿವೃದ್ಧಿಗೆ ಉದ್ದೇಶಿಸಲಾಗಿದ್ದು, ಪ್ರಮುಖವಾಗಿ ಜೈಲು ರಸ್ತೆಯ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಮೊದಲ ಹಂತದಲ್ಲಿ ಕೆಯುಐಡಿಎಫ್‌ಸಿ ವತಿಯಿಂದ ಒಳಚರಂಡಿ ಜಾಲವನ್ನು ಹೊಸದಾಗಿ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ.

ಎಂ.ಜಿ. ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾದಾಗ ಕೆನರಾ ಕಾಲೇಜು ರಸ್ತೆ ಮೂಲಕ ಕರಂಗಲಪಾಡಿ, ಬಂಟ್ಸ್‌ಹಾಸ್ಟೆಲ್ ರಸ್ತೆಯನ್ನು ಸುಲಭವಾಗಿ ಸಂಪರ್ಕಿಸಬಹುದು. ಲಘುವಾಹನ ಸವಾರರು ಮುಖ್ಯರಸ್ತೆಯ ಬದಲು ಇದನ್ನೇ ಹೆಚ್ಚಾಗಿ ಬಳಸುತ್ತಾರೆ. ಪ್ರತಿವರ್ಷ ತೇಪೆ ಕಾಮಗಾರಿ ನಡೆಯುವುದು ಸಾಮಾನ್ಯ. ನಗರ ಮಧ್ಯದಲ್ಲಿದ್ದರೂ, ರಸ್ತೆ ಅಭಿವೃದ್ಧಿಯಾಗದೆ ಬಾಕಿ ಉಳಿದಿತ್ತು. ಪ್ರಸಕ್ತ ಇಲ್ಲಿ ಫುಟ್‌ಪಾತ್ ಸಹಿತ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಲಿದೆ.

ಕಾಮಗಾರಿ ವಿವರ: ಪ್ರಥಮ ಹಂತದಲ್ಲಿ ಬೆಸೆಂಟ್ ಜಂಕ್ಷನ್‌ನಿಂದ ಕಾಪುಚಿನ್ ಚರ್ಚ್‌ವರೆಗಿನ ರಸ್ತೆಯಲ್ಲಿ ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಮುಗಿದ ಬಳಿಕ ರಸ್ತೆ ಕಾಮಗಾರಿ ಆರಂಭವಾಗಲಿದೆ. ಕೆಲವೆಡೆ 12 ಅಡಿ, ಕೆಲವು ಭಾಗದಲ್ಲಿ 15 ಅಡಿ ಅಗಲದ ರಸ್ತೆ ನಿರ್ಮಾಣವಾಗಲಿದೆ. ಬೆಸೆಂಟ್ ಜಂಕ್ಷನ್‌ನಿಂದ, ಕೆನರಾ ಕಾಲೇಜು, ಸಬ್‌ಜೈಲ್, ಡಯೆಟ್ ಸಂಸ್ಥೆ ಮೂಲಕ ಕಾಪುಚಿನ್ ಚರ್ಚ್‌ವರೆಗೆ ಒಂದು ರಸ್ತೆ, ಜಿಲ್ಲಾ ಪಶುವೈದ್ಯಕೀಯ ಇಲಾಖೆ ಕಚೇರಿ ಬಳಿಯಿಂದ ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕರ ಕಚೇರಿವರೆಗೆ ಇನ್ನೊಂದು ರಸ್ತೆ, ಸಬ್‌ಜೈಲ್ ಮುಂಭಾಗದಿಂದ ಇಬ್ರೋಸ್ ಕಾಂಪ್ಲೆಕ್ಸ್ ಮೂಲಕವಾಗಿ ಎಂಜಿ ರಸ್ತೆಗೆ ಸಂಪರ್ಕಿಸುವ ಮತ್ತೊಂದು ರಸ್ತೆ ಹೀಗೆ ಕಾಮಗಾರಿ ನಡೆಯಲಿದೆ.

ಜೈಲು ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಎಲ್ಲ ಸೇರಿ ಅಂದಾಜು 800 ಮೀ. ರಸ್ತೆ ನಿರ್ಮಾಣವಾಗಲಿದೆ. ಫುಟ್‌ಪಾತ್, ಡ್ರೈನ್, ಸ್ಟ್ರೀಟ್‌ಲೈಟ್ ಎಲ್ಲವನ್ನೂ ಒಳಗೊಂಡ ಕಂಪ್ಲೀಟ್ ಸ್ಮಾರ್ಟ್ ಸಿಟಿ ರಸ್ತೆಯಾಗಿದ್ದು, 2022ರ ಜನವರಿ ಅಂತ್ಯದೊಳಗೆ ಮುಗಿಸುವ ಉದ್ದೇಶ ಹೊಂದಲಾಗಿದೆ. ಶರವು ದೇವಸ್ಥಾನಕ್ಕೆ ಹೋಗುವ ರಸ್ತೆ ಅಭಿವೃದ್ಧಿಗೂ ಗುದ್ದಲಿ ಪೂಜೆ ನಡೆಸಲಾಗಿದ್ದು, ಶೀಘ್ರ ಈ ರಸ್ತೆಯೂ ಅಭಿವೃದ್ಧಿ ಹೊಂದಲಿದೆ.

ಅರುಣ್‌ಪ್ರಭಾ ಜನರಲ್ ಮ್ಯಾನೇಜರ್, ಸ್ಮಾರ್ಟ್ ಸಿಟಿ ಲಿಮಿಟೆಡ್