ಬೆಳಗಾವಿ: ನಗರದ ಹೊರವಲಯದಲ್ಲಿರುವ ಜೈ ಕಿಸಾನ್ ತರಕಾರಿ ಮಾರುಕಟ್ಟೆ ರೈತರಿಗೆ ಅನುಕೂಲಕರವಾಗಿದ್ದು, ಇದನ್ನು ಬಂದ್ ಮಾಡದಂತೆ ಒತ್ತಾಯಿಸಿ ಕರ್ನಾಟಕ ಯುವ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟಿಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜೈ ಕಿಸಾನ್ ತರಕಾರಿ ಮಾರುಕಟ್ಟೆಯು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಇರುವುದರಿಂದ ತರಕಾರಿ ಸಾಗಿಸಲು ಅನುಕೂಲವಾಗಿದೆ. ಜತೆಗೆ ಸರ್ಕಾರಿ ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ರೈತರಿಂದ ಶೇ.8&15 ಕಮಿಷನ್ ಪಡೆಯುತ್ತಿದ್ದಾರೆ. ಇದು ಆರ್ಥಿಕವಾಗಿ ಹೊರೆಯಾಗುತ್ತಿದೆ. ಸ್ಪರ್ಧಾತ್ಮಕ ಬೆಲೆ ಸಿಗಲಿ ಎಂಬ ಉದ್ದೇಶದಿಂದ ಸರ್ಕಾರ ಖಾಸಗಿ ಮಾರುಕಟ್ಟೆ ಸ್ಥಾಪಿಸಲು ಅವಕಾಶ ನೀಡಿದೆ. ಅಧಿಕಾರಿಗಳು ರಾಜಕೀಯ ಒತ್ತಡದಿಂದ ಮಾರುಕಟ್ಟೆ ಬಂದ್ ಮಾಡಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು. ಜಗದೀಶ ಪಾಟೀಲ, ರಾಜಪ್ಪ ಪಾಟೀಲ, ಶಿವಪುತ್ರಯ್ಯ ಹಿರೇಮಠ, ಶಿವರಾಯಗೌಡ ಪಾಟೀಲ ಇತರರಿದ್ದರು.
ಮೇಯರ್ಗೆ ಮನವಿ: ನಗರದ ಹೊರವಲಯದ ಜೆ ಕಿಸಾನ್ ಖಾಸಗಿ ಸಗಟು ತರಕಾರಿ ಮಾರುಕಟ್ಟೆ ಬಂದ್ ಮಾಡಬಾರದು ಎಂದು ಒತ್ತಾಯಿಸಿ ಮಾರುಕಟ್ಟೆಯ ವ್ಯಾಪಾರಿಗಳು ಮೇಯರ್ ಮಂಗೇಶ ಪವಾರಗೆ ಶುಕ್ರವಾರ ಮನವಿ ಸಲ್ಲಿಸಿದರು.
ಕೆಲವರು ಮಾರುಕಟ್ಟೆ ಮುಚ್ಚಲು ಹುನ್ನಾರ ನಡೆಸಿದ್ದಾರೆ. ಸರ್ಕಾರ ಇದಕ್ಕೆ ಆಸ್ಪದ ಕೊಡಬಾರದು ಎಂದು ಪಾಲಿಕೆ ಸದಸ್ಯ ಮುಜಮ್ಮಿಲ್ ಡೋಣಿ ಒತ್ತಾಯಿಸಿದರು. ಈ ಬಗ್ಗೆ ಪರಿಶೀಲಿಸಿ, ಸರ್ಕಾದ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ಮೇಯರ್ ಭರವಸೆ ನೀಡಿದರು.