ಜಿಲ್ಲೆ

ವೇತನ ನೀಡಲು ತಾರತಮ್ಯ ಮಾಡದಿರಿ: ಜಾಗೃತಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್.ಅಶ್ವಥಿ ಎಚ್ಚರಿಕೆ

reportermys

ಮಂಡ್ಯ: ಹೊರಗುತ್ತಿಗೆ ಆಧಾರದ ಮೇಲೆ ನೇಮಕವಾಗಿ ಕೆಲಸ ಮಾಡುತ್ತಿರುವ ಸ್ವಚ್ಛತಾಗಾರರಿಗೆ ಕನಿಷ್ಠ ವೇತನ ನೀಡುವಲ್ಲಿ ತಾರತಮ್ಯ ಮಾಡದೆ ಸರ್ಕಾರ ನಿಗದಿಪಡಿಸಿರುವ ವೇತನವನ್ನು ಪಾವತಿಸಿ ಎಂದು ಜಿಲ್ಲಾಧಿಕಾರಿ ಎಸ್.ಅಶ್ವಥಿ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ ವೃತ್ತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ-2013ರ ಮತ್ತು ನಿಯಮ 2013ರನ್ನು ಅನುಷ್ಠಾನಗೊಳಿಸುವ ಸಂಬಂಧ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿರುವ ಸ್ವಚ್ಛತಾಗಾರರಿಗೆ ಇಎಸ್‌ಐ ಹಾಗೂ ಪಿಎಫ್ ಸೌಲಭ್ಯಗಳನ್ನು ಒದಗಿಸಲು ನಿಯಮಾನುಸಾರ ಕ್ರಮವಹಿಸಿ ತಾಲೂಕು ಪಂಚಾಯಿತಿಗೆ ಪ್ರಸ್ತಾವನೆ ಸಲ್ಲಿಸುವಂತೆ ಪಿಡಿಒಗಳಿಗೆ ಸೂಚಿಸಿದರು.

ಸ್ವಚ್ಛತಾ ಸಿಬ್ಬಂದಿ ಅರ್ಹ ವೇತನವನ್ನು ನಿಯಮಾನುಸಾರ ಅವರ ಬ್ಯಾಂಕ್ ಖಾತೆಗಳಿಗೆ ಪಾವತಿಸಲಾಗುತ್ತಿದೆ. ಆದರೆ, ಸಿಬ್ಬಂದಿಗೆ ಮೂರನೇ ವ್ಯಕ್ತಿ ಅಥವಾ ಟೆಂಡರ್‌ದಾರರಿಂದ ಹಣ ವಾಪಸ್ ನೀಡುವಂತೆ ಬೇಡಿಕೆ ನೀಡಿದ್ದಲ್ಲಿ ಅಥವಾ ಬೆದರಿಸಿದಲ್ಲಿ ಸಂಬಂಧಪಟ್ಟ ತಾಲೂಕು ಆರೋಗ್ಯಾಧಿಕಾರಿಗಳಿಗೆ ಹಾಗೂ ಆಡಳಿತ ವೈದ್ಯಾಧಿಕಾರಿಗಳಿಗೆ ಸೂಕ್ತ ದಾಖಲೆಗಳೊಂದಿಗೆ ದೂರು ನೀಡಲು ಸೂಚಿಸಿ ಎಂದರು.

ಜಿಪಂ ಸಿಇಒ ಶಾಂತಾ ಎಲ್.ಹುಲ್ಮನಿ ಮಾತನಾಡಿ, ಸ್ವಚ್ಛತಾಗಾರರಿಗೆ ಅನುಕೂಲವಾಗುವಂತೆ ಎಲ್ಲ ಸ್ಮಶಾನ ಭೂಮಿಗಳಲ್ಲಿ ಸಾರ್ವಜನಿಕ ಸ್ಮಶಾನ ಎಂದು ನಾಮಫಲಕ ಅಳವಡಿಸುವುದರ ಜತೆಗೆ ಸ್ಮಶಾನದಲ್ಲಿ ನೀರು, ಕಾಂಪೌಂಡ್ ಹಾಗೂ ಇನ್ನಿತರ ಸೌಲಭ್ಯಗಳನ್ನು ನರೇಗಾ ಯೋಜನೆಯಡಿ ಕಲ್ಪಿಸಿಕೊಡಲು ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಈ ಸಂಬಂಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಎಎಸ್ಪಿ ವೇಣುಗೋಪಾಲ್, ಉಪವಿಭಾಗಾಧಿಕಾರಿಗಳಾದ ಬಿ.ಸಿ.ಶಿವಾನಂದಮೂರ್ತಿ, ಆರ್.ಐಶ್ವರ್ಯಾ, ಸಮಾಜ ಕಲ್ಯಾಣ ಇಲಾಖೆ ಉರ್ದೇಶಕ ಬಿ.ರಂಗೇಗೌಡ, ಜಿಪಂ ಉಪಕಾರ್ಯದರ್ಶಿ ಸಂಜೀವಪ್ಪ, ಸಮಿತಿ ಸದಸ್ಯರಾದ ನಂಜುಂಡಮೌರ್ಯ, ಕೃಷ್ಣ, ಪಳಿನಿಯಮ್ಮ, ಪಾಪಮ್ಮ ಇತರರಿದ್ದರು.