ಹುಣಸೂರು ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ.ಬಾಬು ಜಗಜೀವನ ರಾಮ್ ಪುಣ್ಯಸ್ಮರಣೆ ಸಮಾರಂಭದಲ್ಲಿ ಗಣ್ಯರು ಬಾಬೂಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಡಿ.ಕುಮಾರ್, ನೇರಳಕುಪ್ಪೆ ಮಹದೇವ್, ಶಿವಣ್ಣ, ಶಿವಮ್ಮ, ರಾಯನಹಳ್ಳಿ ಸ್ವಾಮಿ ಇದ್ದರು. 
ಜಿಲ್ಲೆ

ಜಗಜೀವನ ರಾಮ್ ಆದರ್ಶ ರಾಜಕಾರಣಿ

ಹುಣಸೂರು: ದೇಶದ ಮಾಜಿ ಉಪಪ್ರಧಾನಿ ಬಾಬು ಜಗಜೀವನ ರಾಮ್ ಸತತ ನಾಲ್ಕು ದಶಕಗಳ ಕಾಲ ಒಂದೇ ಒಂದು ಕಪ್ಪುಚುಕ್ಕೆಯಿಲ್ಲದೆ ಸ್ವಚ್ಛ ಮತ್ತು ಪಾರದರ್ಶಕ ಆಡಳಿತ ನೀಡುವ ಮೂಲಕ ಇಂದಿನ ರಾಜಕಾರಣಿಗಳಿಗೆ ಮಾದರಿ ಆಗಿದ್ದಾರೆ ಎಂದು ಆದಿಜಾಂಬವ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಕುಮಾರ್ ಬಣ್ಣಿಸಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರ 39ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೃಷಿ, ಕಾರ್ಮಿಕ, ರೈಲ್ವೆ ಸೇರಿದಂತೆ ವಿವಿಧ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿ ಹಸಿರು ಕ್ರಾಂತಿಯ ಮೂಲಕ ಬಡಜನರ ಹಸಿವು ನೀಗಿಸಿದರು. ಉತ್ತಮ ಆರ್ಥಿಕ ತಜ್ಞರಾಗಿ ದೇಶದ ಆರ್ಥಿಕತೆ ಬೆಳೆಯಲು ಸಲಹೆ-ಸೂಚನೆ ನೀಡಿದ್ದರು. ದೇಶದ ಪ್ರಧಾನಿಯಾಗುವ ಎಲ್ಲ ಅರ್ಹತೆಗಳಿದ್ದರೂ ರಾಜಕಾರಣದ ಒಳಸುಳಿಗೆ ಸಿಲುಕಿ ಪ್ರಧಾನಿಯಾಗಲಿಲ್ಲ. ಆದರೆ ಅವರ ಆಡಳಿತದ ತತ್ವಾದರ್ಶ, ಇಂದಿನ ರಾಜಕಾರಣಿಗಳಿಗೆ ಅತ್ಯಗತ್ಯ, ಇಂದಿಗೂ ಮಾದರಿಯಾಗಿ ಉಳಿದಿವೆ ಎಂದರು.

ತಹಸೀಲ್ದಾರ್ ಜೆ.ಮಂಜುನಾಥ್ ಮಾತನಾಡಿ, ಬಾಬೂಜಿ ಜಾತಿಮತ ಪಂಥಗಳನ್ನು ಮೀರಿ ಆಡಳಿತ ನಡೆಸಿದರು. ಮಾನವೀಯ ನೆಲೆಗಟ್ಟಿನಲ್ಲಿ ದೇಶದ ಬಡಜನರ ಹಸಿವು ನೀಗಿಸಲು ಹಸಿರುಕ್ರಾಂತಿಯನ್ನೇ ಜಾರಿಗೆ ತಂದರು. ಅಸ್ಪಶ್ಯತೆ ವಿರುದ್ಧ ಹೋರಾಡಿದರು. ದೇಶದ ಅಂದಿನ ಆರ್ಥಿಕ ಮುಗ್ಗಟ್ಟು, ಬರಪರಿಸ್ಥಿತಿಗೆ ಉತ್ತಮ ಪರಿಹಾರೋಪಾಯ ನೀಡುವ ಮೂಲಕ ಜನ ಮಾನಸದಲ್ಲಿ ಶಾಶ್ವತವಾಗಿ ಉಳಿದುಬಿಟ್ಟರು ಎಂದರು.

ಆದಿಜಾಂಬವ ಸಮಾಜದ ತಾಲೂಕು ಅಧ್ಯಕ್ಷ ಶಿವಣ್ಣ ಮಾತನಾಡಿದರು. ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್, ಮುಖಂಡರಾದ ರಾಚಯ್ಯ, ರಾಯನಹಳ್ಳಿ ಸ್ವಾಮಿ, ದೊಡ್ಡಹೆಜ್ಜೂರು ನಾಗೇಶ್, ಅಗ್ರಹಾರ ಶಿವಣ್ಣ, ಮೋಹನ್, ಮಾದೇವ್, ಚೆಲುವರಾಜ್ ವೆಂಕಟೇಶ್, ಶಿವಮ್ಮ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಅಶೋಕ್ ಕುಮಾರ್ ಪರಿಶಿಷ್ಟ ವರ್ಗಗಳ ಇಲಾಖೆ ಅಧಿಕಾರಿ ಗಂಗಾಧರ್ ಇತರರು ಇದ್ದರು.