ಜಿಲ್ಲೆ

ಜಾದೂಗಾರ ಕಡಬ ಶ್ರೀನಿವಾಸ್‌ಗೆ ಜಾನಪದ ಅಕಾಡೆಮಿ ಪ್ರಶಸ್ತಿ ; 5ನೇ ತರಗತಿಯಲ್ಲಿ ಓದುತ್ತಿದ್ದಾಗ ಹತ್ತಿದ ಜಾದೂ ಗೀಳು

Tumakuru

ತುಮಕೂರು : ಗುಬ್ಬಿ ತಾಲೂಕಿನ ಕಡಬ ಗ್ರಾಮದ ಕಡಬ ಶ್ರೀನಿವಾಸ್ ಅವರು 2021ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. 5ನೇ ತರಗತಿಯಲ್ಲಿ ಓದುತ್ತಿದ್ದಾಗ ಹತ್ತಿದ ಜಾದೂ ಗೀಳು ಶ್ರೀನಿವಾಸ್ ಬದುಕಿನ ಹಾದಿಯನ್ನೇ ಬದಲಿಸಿತು. 35 ವರ್ಷಗಳಿಂದ ಜಾದೂ ಮಾಡುವ ಮೂಲಕ ದೇಶದ ಹಲವು ರಾಜ್ಯಗಳಿಗೆ ಹೋಗಿ ಜಾದೂ ವಿಶೇಷತೆಯನ್ನು ಸಾರುತ್ತಿರುವ ಅವರು ಯಕ್ಷಿಣಿ, ಇಂದ್ರಜಾಲ, ಮೋಡಿ ಕಲೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿಕೊಂಡು ಬರುತ್ತಿರುವುದು ವಿಶೇಷವೆನಿಸಿದೆ.

ಕಡಬ ಗ್ರಾಮದ ವೆಂಕಟಲಕ್ಷ್ಮಮ್ಮ ಮತ್ತು ವೆಂಕಟಗಿರಿಯಪ್ಪ ದಂಪತಿ ಪುತ್ರ ಶ್ರೀನಿವಾಸ್‌ಗೆ ಮೋಡಿ ಮಾಡುವುದನ್ನು ಕಲಿಸಿದ ಮೊದಲ ಗುರು ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಕರಿಯಣ್ಣ ಶೆಟ್ಟಿ. ನಂತರ ಅಂತಾರಾಷ್ಟ್ರೀಯ ಜಾದೂಗಾರ ಎಂ.ಸಿ.ಸರ್ಕಾರ್ ಗರಡಿಯಲ್ಲಿ ಇನ್ನಷ್ಟು ಇಂದ್ರಜಾಲ ವಿದ್ಯೆ ಕಲಿಯುವ ಅವಕಾಶ ಗಿಟ್ಟಿಸಿಕೊಂಡರು. ಯಕ್ಷಿಣಿ ಚಮತ್ಕಾರ ಕೈಹಿಡಿದ ಬಳಿಕ ಶ್ರೀನಿವಾಸ್, ಹಾಸ್ಯಭರಿತವಾದ ಜಾದೂ ಪ್ರದರ್ಶನಗಳಿಗೆ ಒತ್ತು ಕೊಡುವ ಮೂಲಕ ತಮಿಳುನಾಡು, ಆಂಧ್ರಪ್ರದೇಶ, ಕೋಲ್ಕತ, ದೆಹಲಿ ಸೇರಿ ವಿವಿಧ ಭಾಗಗಳಲ್ಲಿ ಮೋಡಿಗಾರನೆನಿಸಿದರು. ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆೆ. 1982ರಲ್ಲಿ ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ 1 ತಿಂಗಳು ಏರ್ಪಡಿಸಿದ್ದ ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣದೇವರಾಯನ ನಾಟಕ ಪ್ರದರ್ಶನದಲ್ಲಿ ‘ತೆನಾಲಿರಾಮ’ ಪಾತ್ರ ಅಭಿನಯಿಸಿ ಹಾಸ್ಯ ಜಾದೂಗಾರನಾಗಿ ಹೊರಹೊಮ್ಮಿದರು.

ಜಾದೂ ಕಾರ್ಯಕ್ರಮದಲ್ಲಿ ಕನ್ನಡದ ಜಾನಪದ ಹಾಡುಗಳನ್ನು ಬಳಕೆ ಮಾಡಿಕೊಂಡು ಜಾದೂ ಮಾಡುವ ಶ್ರೀನಿವಾಸ್ ಜಾನಪದ ವೇಷ, ಭೂಷಣದ ಜತೆಗೆ ಜಾನಪದ ಪರಿಕರಗಳನ್ನು ಬಳಸಿಕೊಂಡು ಎಲ್ಲ ವರ್ಗದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮುಡಿಗೇರಿವೆ ಹಲವು ಪ್ರಶಸ್ತಿ : ಜಾದೂ ಕಲೆ ಮನರಂಜನೆ, ಹೊಟ್ಟೆ ಪಾಡಿಗೆ ಮಾತ್ರ ಸೀಮಿತಗೊಳಿಸಿಕೊಳ್ಳದ ಶ್ರೀನಿವಾಸ್, ಅನಾಥಾಶ್ರಮ, ವೃದ್ಧಾಶ್ರಮ, ಆಸ್ಪತ್ರೆಗಳಿಗೂ ಭೇಟಿ ನೀಡಿ ರೋಗಿಗಳ ಜತೆ ಮಾನಸಿಕವಾಗಿ ನೊಂದಿರುವವರಿಗೆ ಚೈತನ್ಯ ತುಂಬಲು ಜಾದು ಕಲೆ ಪ್ರದರ್ಶಿಸಿರುವುದು ಗಮನಾರ್ಹವೆನಿಸಿದೆ. ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಸೇವಾರತ್ನ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪ್ರಶಸ್ತಿ ಸೇರಿ ಹತ್ತಾರು ಪ್ರಶಸ್ತಿಗಳಿಗೆ ಕೊರಳೊಡ್ಡಿರುವ ಶ್ರೀನಿವಾಸ್ ಇಡೀ ಕುಟುಂಬ ಜಾದೂ ಕುಟುಂಬವಾಗಿದೆ. ಪತ್ನಿ ಶಾರದಾ ಕೂಡ ಶ್ರೀನಿವಾಸ್ ಜಾದು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತ ಬಂದಿದ್ದಾರೆ. ಪುತ್ರಿಯರಾದ ಜ್ಯೋತಿ, ತೇಜಸ್ವಿನಿ ಹಾಗೂ ಪುತ್ರ ಹಿತೈಷ್ ಕಡಬ ಅವರಿಗೂ ರಕ್ತಗತವಾಗಿ ಜಾದೂ ಕಲೆ ಒಲಿದುಬಂದಿದೆ.

ಜಾನಪದ ತಜ್ಞ ಎಚ್.ಎಲ್.ನಾಗೇಗೌಡರ ಜತೆಗಿನ ಒಡನಾಟ ನನ್ನ ಜಾದೂ ವಿದ್ಯೆಗೆ ಜಾನಪದ ಮೆರಗು ನೀಡಲು ನೆರವಾಯಿತು. ಜಾನಪದ ಕ್ಷೇತ್ರ ಕಾರ್ಯಕರ್ತನಾಗಿಯೂ ಸೇವೆ ಸಲ್ಲಿಸಿರುವುದು ನನಗೆ ಜಾನಪದ ಹಾಗೂ ಜಾದೂಗಾರ ಪ್ರಶಸ್ತಿ ಒಲಿಯಲು ಮೂಲ ಕಾರಣ. ಕಡಬ ಶ್ರೀನಿವಾಸ್, ಜಾನಪದ ಹಾಸ್ಯ ಜಾದೂಗಾರ