ವಿಜಯಪುರ: ವಕ್ಫ್ ಮಸೂದೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಚಿಸಿದ ಜಂಟಿ ಸಂಸದೀಯ ಸಮಿತಿ ಚೇರ್‌ಮನ್ ಜಗದಾಂಬಿಕಾ ಪಾಲ್ ಆಗಮನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಅಪಸ್ವರ ಎತ್ತಿರುವ ಅಹಿಂದ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ, ಸರ್ಕಾರದ ಹಣದಲ್ಲಿ ರಾಜಕಾರಣ ಮಾಡಬೇಡಿ ಎಂದಿದ್ದಾರೆ.
ಜಗದಾಂಬಿಕಾ ಪಾಲ್ ಅವರ ಪ್ರವಾಸ ವೇಳಾ ಪಟ್ಟಿ ಪ್ರಕಟಗೊಂಡಿದೆ. ಅವರಿಗೆ ಸ್ವಾಗತ ಕೋರುತ್ತೇವೆ. ಆದರೆ, ಸಚಿವೆ ಶೋಭಾ ಕರಂದ್ಲಾಜೆ ವಿನಂತಿ ಮೇರೆಗೆ ತುರ್ತು ಪ್ರವಾಸ ನಿಗದಿಮಾಡಿಕೊಂಡು ಬರುತ್ತಿರುವುದು ಖಂಡನೀಯ. ಅಲ್ಲದೇ, ಶೋಭಾ ಅವರು ನ.4ರಂದು ವಿಜಯಪುರದಿಂದಲೇ ಪತ್ರ ಬರೆದು ‘ವಿಜಯಪುರ ವಕ್ಫ್ ಬೋರ್ಡ್ ವಿರುದ್ಧ ದಲಿತರು, ಹಿಂದುಳಿದವರು, ರೈತರು ಧರಣಿ ಕೂತಿದ್ದಾರೆ. ಅವರ ಸಮಸ್ಯೆಗಳನ್ನಾಲಿಸಲು ಬರಬೇಕು’ ಎಂದು ಇನ್ನೂ ಅನೇಕ ಸುಳ್ಳುಗಳನ್ನು ಸೇರಿಸಿ ಪತ್ರ ಬರೆದಿದ್ದಾರೆ. ಈ ಪತ್ರ ಮುಟ್ಟಿದ ತಕ್ಷಣ ತರಾತುರಿಯಾಗಿ ಪ್ರವಾಸ ಕೈಗೊಂಡಿರುವ ಜಗದಾಂಬಿಕಾ ಪಾಲ್ ಅವರು ತಾವೊಬ್ಬ ಜಂಟಿ ಸಂಸದೀಯ ಸಮಿತಿಯ ಚೇರಮನ್ ಎನ್ನುವ ಪರಿಜ್ಞಾನ ಸಹ ಮರೆತಂತಿದೆ ಎಂದು ಗಣಿಗಾರ ವ್ಯಂಗ್ಯವಾಡಿದ್ದಾರೆ.
ಪಾಲ್ ಅವರು ಜಂಟಿ ಸಂಸದೀಯ ಸಮಿತಿಯ ಸದಸ್ಯರನ್ನು ಸಹ ತಮ್ಮ ಜೊತೆ ಪ್ರವಾಸಕ್ಕೆ ಕರೆತರಬೇಕಾಗಿತ್ತು. ಅದನ್ನು ಬಿಟ್ಟು ಒಬ್ಬರೇ ಬರಲು ನಿಯಮಾನುಸಾರ ಅವಕಾಶವಿದೆಯಾ? ಇವರೊಬ್ಬರೇ ಬಂದು ಕೇವಲ ಬಿಜೆಪಿಯ ಧರಣಿ ನಿರತರನ್ನು ಭೇಟಿ ಮಾಡಿ ಹೋಗುವುದಾಗಿ ಅವರ ಪ್ರವಾಸ ಕಾರ್ಯಕ್ರಮದಲ್ಲಿದೆ. ಇದು ಜಂಟಿ ಸಮಿತಿಯ ಸದಸ್ಯರಿಗೆ ಮಾಡುತ್ತಿರುವ ಅವಮಾನ ಮತ್ತು ಕರ್ತವ್ಯ ಲೋಪ ಎಂದಿದ್ದಾರೆ.
ಪಾಲ್ ಅವರು ವಿಜಯಪುರಕ್ಕೆ ಬಂದಾಗ ಜಿಲ್ಲಾಧಿಕಾರಿಯವರ ಕಚೇರಿಯಲ್ಲೇ ಪ್ರಚಲಿತ ವಿದ್ಯಮಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಂದಿಗೆ ಚರ್ಚಿಸಬೇಕು. ಅಹವಾಲು ಆಲಿಸಬೇಕು. ಜಿಲ್ಲಾದಿಕಾರಿಯಿಂದಲೂ ವಿಷಯದ ಕುರಿತು ವರದಿ ಪಡೆಯಬೇಕು. ಇಲ್ಲದಿದ್ದರೆ ಅವರು ಸಾಂವಿಧಾನಿಕ ಹುದ್ದೆಯನ್ನು ಬಿಜೆಪಿಯ ಪದಾಧಿಕಾರಿ ಹುದ್ದೆಯನ್ನಾಗಿ ಮಾಡಿಕೊಂಡು ಅಧಿಕಾರ ದುರುಪಯೋಗ ಮಾಡಿಕೊಂಡ ಹಾಗೆಯೇ ಸರಿ ಎಂದು ಎಸ್.ಎಂ. ಪಾಟೀಲ ಗಣಿಹಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.