ರಬಕವಿ/ಬನಹಟ್ಟಿ: ತಾಲೂಕಿನ ಜಗದಾಳ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಭಟ್ಟಡ ಪಾರ್ಮ್‌ಹೌಸ್‌ನಲ್ಲಿನ ಹಳ್ಳದ ದುರ್ಗಾದೇವಿಯ ಜಾತ್ರೆ ಶುಕ್ರವಾರ ಅದ್ದೂರಿಯಾಗಿ ಜರುಗಿತು.
ಬೆಳಗ್ಗೆ 5 ಗಂಟೆಗೆ ದೇವಿಗೆ ವಿಶೇಷ ಅಭಿಷೇಕ, ರುದ್ರಾಭಿಷೇಕ, ಹೋಮ ಹವನಗಳು ಜರುಗಿದವು. 9ಗಂಟೆಗೆ ಮುತೈದೆಯರಿಂದ ದುರ್ಗಾದೇವಿಗೆ ಉಡಿತುಂಬುವ ಕಾರ್ಯಕ್ರಮ ಜರುಗಿತು. ಈ ಹಿಂದೆ ಈ ಸ್ಥಳದಲ್ಲಿ ಪ್ರಾಣಿ ಬಲಿಕೊಡಲಾಗುತ್ತಿತ್ತು ಎಂದು ವಾಡಿಕೆ ಇತ್ತು. ಆದರೆ ಕಾಲಾ ನಂತರ ಅದು ನಿಂತುಹೋಗಿದ್ದು, ಹುಗ್ಗಿ, ಹೋಳಗಿ, ಕಡುಬು ಸೇರಿದಂತೆ ಅನೇಕ ಸಿಹಿ ಪದಾರ್ಥಗಳನ್ನು ಎಡೆಹಿಡಿದು ದೇವಿಗೆ ಸಮರ್ಪಿಸಲಾಗುತ್ತಿದೆ.
ಇಲ್ಲಿನ ದುರ್ಗಾದೇವಿ ಮೂರ್ತಿಯು ಉದ್ಬವ ದೇವಿಯಾಗಿದ್ದಾಳೆಂದು ಹೇಳಲಾಗುತ್ತದೆ. ಜಾಗೃತ ಸ್ಥಳವಾಗಿದ್ದರಿಂದ ಮಹಾರಾಷ್ಟ್ರ, ಗೋವಾ ರಾಜ್ಯದಿಂದಲೂ ಭಕ್ತರ ದಂಡು ಬಂದು ದೇವಿಯ ಆಶೀರ್ವಾದ ಪಡೆಯುತ್ತಾರೆ. ಸುಮಾರು 80 ಸಾವಿರದಷ್ಟು ಜನರಿಗೆ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ದ್ವಾರಕಾಧೀಶ ಭಟ್ಟಡ, ಅಡಿವೆಪ್ಪ ಪಾಟೀಲ, ಸುರೇಶ ಅಸ್ಕಿ, ತಿಪ್ಪಣ್ಣ ಕುಳಲಿ, ವಿಠ್ಠಲ ಜಾಧವ, ಸದಾಶಿವ ದಡ್ಡಿಮನಿ, ಮಾರುತಿ ಸೋರಗಾವಿ, ಸದಾಶಿವ ಬಂಗಿ, ಮಲ್ಲಪ್ಪ ಕಾನಟ್ಟಿ, ಗುರು ಅಸ್ಕಿ, ಶ್ರೀಶೈಲ ಪಾಟೀಲ, ಮಹೇಶ ಭಟ್ಟಡ, ಧರೆಪ್ಪ ಉಳ್ಳಾಗಡ್ಡಿ ಮತ್ತಿತರರಿದ್ದರು. ಜಾತ್ರೆ ಅಂಗವಾಗಿ ಮಲ್ಲಿಕಾರ್ಜುನ ನಾಟ್ಯ ಸಂಘದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಾಟಕ ಪ್ರದರ್ಶನಗೊಂಡಿತು.