ಜಿಲ್ಲೆ

ಮಲ್ಪೆ- ಮೊಳಕಾಲ್ಮೂರು ರಸ್ತೆ ವಿಸ್ತರಣೆಯದ್ದೇ ಚರ್ಚೆ

Davangere - Desk - Basavaraja P

ಮಾರ್ಗ ಅಭಿವೃದ್ಧಿಗೆ ಲೋಕೋಪಯೋಗಿ ನಿರ್ಲಕ್ಷೃ l ಜಗಳೂರಲ್ಲಿ ಸಂಚಾರ ದಟ್ಟಣೆ ಸಮಸ್ಯೆ

ಲೋಕೇಶ್ ಎಂ. ಐಹೊಳೆ ಜಗಳೂರು: ಪಟ್ಟಣದ ಹೃದಯ ಭಾಗದಲ್ಲಿ ಹಾದುಹೋಗಿರುವ ಮಲ್ಪೆ- ಮೊಳಕಾಲ್ಮೂರು, ಕೊಟ್ಟೂರು, ಬಿದರಕೆರೆ ರಸ್ತೆ ವಿಸ್ತರಣೆ ಯಾವಾಗ ಎಂಬ ಕೂಗು ಪದೇಪದೆ ಕೇಳಿಬರುತ್ತಿದೆ.

ರಾಜ್ಯದ ಬಹುತೇಕ ತಾಲೂಕುಗಳಲ್ಲಿ ರಸ್ತೆ ವಿಸ್ತರಣೆಯಾಗಿದ್ದರೂ ಜಗಳೂರು ಪಟ್ಟಣದ ವ್ಯಾಪ್ತಿಯಲ್ಲಿ ರಸ್ತೆಗಳ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ನಿರ್ಲಕ್ಷೃ ವಹಿಸಿದೆ ಎಂಬ ಆರೋಪ ಕೇಳಿ ಬಂದಿದೆ.

ಕಳೆದ ಇಪ್ಪತ್ತೈದು ವರ್ಷಗಳಿಂದ ಪಟ್ಟಣದ ನಾಗರಿಕ ವಲಯದಲ್ಲಿ ನಿರಂತರವಾಗಿ ರಸ್ತೆಗಳ ವಿಸ್ತರಣೆಯದ್ದೇ ಚರ್ಚೆ ಆಗುತ್ತಿದೆ. ಆದರೆ, ಈವರೆಗೂ ಈ ಕಾರ್ಯಕ್ಕೆ ಚಾಲನೆ ದೊರಕಿಲ್ಲ. ಈ ಹಿಂದಿನ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಚಕಾರ ಎತ್ತಲಿಲ್ಲ.

ದಿನೇ ದಿನೆ ಜನಸಂಖ್ಯೆ ದ್ವಿಗುಣವಾಗಿ ಬೆಳೆಯುತ್ತಿದ್ದು, ವಾಹನಗಳ ಸಂಖ್ಯೆ ಹೆಚ್ಚಾಗುತ್ತಿವೆ. ಅತ್ಯಧಿಕ ಬೈಕ್, ಕಾರು, ಟ್ರ್ಯಾಕ್ಟರ್‌ಗಳು ನೋಂದಣಿ ಆಗುತ್ತಿವೆ. ಯಾವ ರಸ್ತೆಗಳಲ್ಲೂ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಇರುವ ಚಿಕ್ಕ ರಸ್ತೆಗಳಲ್ಲಿ ವಾಹನಗಳು ನಿಲ್ಲಿಸಲಾಗುತ್ತಿದೆ. ಇದರಿಂದ ಮತ್ತಷ್ಟು ಸಂಚಾರ ದಟ್ಟಣೆ ಸಮಸ್ಯೆ ಎದುರಾಗುತ್ತಿದೆ.

ರಸ್ತೆ ವಿಸ್ತರಣೆ ಬಗ್ಗೆ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಗಳಲ್ಲಿ ಅನೇಕ ಬಾರಿ ಚರ್ಚೆಯಾದರೂ ಅನುಷ್ಠಾನಗೊಳ್ಳುತ್ತಿಲ್ಲ. ಸಂಘ- ಸಂಸ್ಥೆಗಳು ವಿಸ್ತರಣೆ ಬಗ್ಗೆ ಧ್ವನಿ ಎತ್ತಿದರೂ ಪ್ರಯೋಜನವಾಗುತ್ತಿಲ್ಲ.

ಸಮಸ್ಯೆ ಎಲ್ಲೆಲ್ಲಿ: ಪಟ್ಟಣದ ಎನ್‌ಎಂಸಿ ಹೋಟೆಲ್, ಮರೇನಹಳ್ಳಿ ರಸ್ತೆ, ಎಸ್‌ಬಿಐ ಬ್ಯಾಂಕ್, ಸರ್ಕಾರಿ ಆಸ್ಪತ್ರೆ, ಡಾ.ಬಿ.ಆರ್. ಅಂಬೇಡ್ಕರ್ ರಸ್ತೆ, ತಾಲೂಕು ಕಚೇರಿ ರಸ್ತೆ, ಟ್ಯಾಕ್ಸಿ ನಿಲ್ದಾಣ, ಪೊಲೀಸ್ ಠಾಣೆ ರಸ್ತೆ, ಕೆನರಾ ಬ್ಯಾಂಕ್ ರಸ್ತೆ ಮತ್ತಿತರ ಬಹುತೇಕ ರಸ್ತೆಗಳಲ್ಲಿ ನಿತ್ಯವೂ ಸಂಚಾರ ದಟ್ಟಣೆ ಕಿರಿಕಿರಿ ಇರುತ್ತದೆ. ಸಂಚಾರ ದಟ್ಟಣೆ ಸಮಸ್ಯೆ ತಡೆಗೆ ಪಿಐ ಶ್ರೀನಿವಾಸ್ ಸಾಕಷ್ಟು ಬದಲಾವಣೆಗಳನ್ನು ತಂದಿದ್ದಾರೆ. ಪ್ರತಿ ರಸ್ತೆಯಲ್ಲೂ ಮೂರು ದಿನ ಎಡಕ್ಕೆ, ಮೂರು ದಿನ ಬಲಕ್ಕೆ ನಿಲ್ಲಿಸಲಾಗುತ್ತಿದೆ. ಆದರೆ, ರಸ್ತೆ ಕಿರಿದಾದ ಕಾರಣ ಸಮಸ್ಯೆ ಬಗೆಹರಿಯುತ್ತಿಲ್ಲ ಎನ್ನುತ್ತಾರೆ ಬುದ್ಧಿಜೀವಿಗಳು.

ಬಿಡಾಡಿ ದನಗಳ ಹಾವಳಿ: ಒಂದು ಕಡೆ ಸಂಚಾರ ದಟ್ಟಣೆ ಸಮಸ್ಯೆಯಾದರೆ ಮತ್ತೊಂದೆಡೆ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ರಸ್ತೆಗಳ ನಡುವೆಯೇ ಮಲಗುತ್ತವೆ. ವೇಗವಾಗಿ ಬರುವ ಬೈಕ್ ಸವಾರರು ನಿಯಂತ್ರಣ ಸಿಗದೇ ಬಿದ್ದು ಗಾಯಗೊಂಡಿದ್ದಾರೆ. ಇವುಗಳನ್ನು ಗೋಶಾಲೆಗಳಿಗೆ ಸ್ಥಳಾಂತರಿಸಬೇಕು. ಇಲ್ಲವೇ ಸಂಬಂಧಿತರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಅಪಘಾತದಲ್ಲಿ ಜೀವಗಳ ಬಲಿ: ಪಟ್ಟಣದ ಎನ್‌ಎಂಸಿ ಹೋಟೆಲ್ ಎದುರು ಕಳೆದ ಆ. 14ರಂದು ನಡೆದ ಬಸ್ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಮೃತಪಟ್ಟಿದ್ದರು. ದಾವಣಗೆರೆ ರಸ್ತೆ ಸೇತುವೆ ಬಳಿ ಬಿದ್ದು ಇಬ್ಬರು ಕಾಲು ಮುರಿದುಕೊಂಡಿದ್ದರು. ಚಳ್ಳಕೆರೆ ರಸ್ತೆಯಲ್ಲಿ ಬೈಕ್ ಸವಾರರು ಬಿದ್ದು ಹತ್ತಾರು ಮಂದಿ ಗಾಯಗೊಂಡಿದ್ದಾರೆ.

ಶಾಸಕರಿಂದ ಗ್ರೀನ್ ಸಿಗ್ನಲ್: ಪಟ್ಟಣದಲ್ಲಿ ರಸ್ತೆ ವಿಸ್ತರಣೆ ವಿಚಾರವಾಗಿ ಹಾಲಿ ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಅನೇಕ ಬಾರಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅಂದಾಜು 20 ಕೋಟಿ ರೂ. ಅನುದಾನವನ್ನು ಸರ್ಕಾರ ನೀಡಿದೆ. ಶೀಘ್ರವೇ ರಸ್ತೆ ತೆರವಿಗೆ ಕ್ರಮ ಕೈಗೊಳ್ಳುವುದಾಗಿ ಕಾರ್ಯಕ್ರಮವೊಂದರಲ್ಲಿ ಶಾಸಕರು ಹೇಳಿಕೆ ನೀಡಿದ್ದರು. ಅದರಂತೆ ಅವರ ಮುಂದೆ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ.

ರಸ್ತೆ ಒತ್ತುವರಿ: ಮಹಾತ್ಮ ಗಾಂಧಿ ಹಳೇ ಬಸ್ ನಿಲ್ದಾಣದಿಂದ ದಾವಣಗೆರೆ ಮಾರ್ಗದ ಎಪಿಎಂಸಿವರೆಗೂ ರಸ್ತೆ ಬಹಳ ಇಕ್ಕಟ್ಟಿನಿಂದ ಕೂಡಿದೆ. ಅಲ್ಲದೆ, ಮುಖ್ಯ ರಸ್ತೆಯ ಪಕ್ಕದಲ್ಲಿ ಪ್ರಬಲರು ಜಾಗ ಒತ್ತುವರಿ ಮಾಡಿಕೊಂಡು ಅಂಗಡಿ, ಮಳಿಗೆ, ಮನೆಗಳ ಕಾಂಪೌಂಡ್‌ಗಳನ್ನು ನಿರ್ಮಿಸಿಕೊಂಡಿದ್ದು, ಮಳೆ ನೀರು ಹರಿದು ಹೋಗಲು ಚರಂಡಿಗಳು ಇಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಕಡೆ ನೀರು ಹರಿಯಲು ಜಾಗವಿಲ್ಲದೆ ರಸ್ತೆಯಲ್ಲಿ ಸಂಗ್ರಹಗೊಂಡು ವಾರಗಟ್ಟಲೆ ದುರ್ವಾಸನೆ ಬೀರುತ್ತದೆ.

ಜಗಳೂರು ಪಟ್ಟಣದ ಚಳ್ಳಕೆರೆ ಮತ್ತು ದಾವಣಗೆರೆ ಏಕೈಕ ಮುಖ್ಯ ರಸ್ತೆಯಾಗಿದ್ದು, ಇದರ ಇಕ್ಕೆಲಗಳಲ್ಲಿ ದೊಡ್ಡ ಡೊಡ್ಡ ಮಳಿಗೆಗಳು ತಲೆ ಎತ್ತಿ ಒತ್ತುವರಿ ಕೂಡ ಆಗಿದೆ. ಹೀಗಾಗಿ ಪಾದಚಾರಿಗಳಿಗೆ ಓಡಾಡಲು ಫುಟ್‌ಪಾಥ್ ಇಲ್ಲದಂತಾಗಿದೆ. ಆದ್ದರಿಂದ ಕೂಡಲೇ ರಸ್ತೆ ವಿಸ್ತರಣೆ ಮಾಡಿಸಿ, ಅಭಿವೃದ್ಧಿಗೆ ಒತ್ತು ನೀಡಬೇಕು.
I ಹನುಮಂತಪ್ಪ, ಸಂಘಟನಾ ಸಂಚಾಲಕ, ದಸಂಸ.

ರಾಜ್ಯ ಹೆದ್ದಾರಿ ಹಾದು ಹೋಗಿದ್ದು, ನಿತ್ಯವೂ ಭಾರಿ ಗಾತ್ರದ ಲಾರಿಗಳು ಸಂಚರಿಸುತ್ತಿವೆ. ಚಿಕ್ಕ ದಾರಿಯಲ್ಲಿ ಬೈಕ್, ಆಟೋ, ಬಸ್‌ಗಳ ಪಾರ್ಕಿಂಗ್ ಮಾಡುತ್ತಿರುವುದು ಮತ್ತಷ್ಟು ತಲೆನೋವಾಗಿದೆ. ಪೊಲೀಸ್ ಇಲಾಖೆ ಎಷ್ಟೇ ಜಾಗೃತಿ ಮೂಡಿಸಿದರೂ ಪ್ರಯೋಜನವಾಗುತ್ತಿಲ್ಲ.
I ವೆಂಕಟೇಶ್, ಸಾರ್ವಜನಿಕ.

ಚಳ್ಳಕೆರೆ, ಕೊಟ್ಟೂರು, ಹರಪಪನಹಳ್ಳಿ, ದಾವಣಗೆರೆಯಲ್ಲಿ ರಸ್ತೆ ವಿಸ್ತರಣೆಯಿಂದ ವಾಹನಗಳು ಸುಗಮ ಸಂಚಾರಕ್ಕೆ ಸಹಕಾರಿಯಾಗಿದೆ. ಆದರೆ, ಜಗಳೂರಿನಲ್ಲಿ ಸ್ವಾತಂತ್ರ್ಯಪೂರ್ವದಿಂದಲೂ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದೇವೆ.
I ನೀಲಪ್ಪ, ಕಲಾವಿದ.

ತಾಲೂಕಿನ ರಾಜಕೀಯ ಇತಿಹಾಸದಲ್ಲಿ ಆಯ್ಕೆಯಾದ ಜನಪ್ರತಿನಿಧಿಗಳು ರಸ್ತೆ ವಿಸ್ತರಣೆ ಬಗ್ಗೆ ಧ್ವನಿ ಕೂಡ ಎತ್ತಿರಲಿಲ್ಲ. ಆದರೆ, ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಕೈ ಹಾಕಿರುವುದು ಶ್ಲಾಘನೀಯ. ಅವರಿಗೆ ಎಲ್ಲ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳ ಸಾಥ್ ನೀಡಬೇಕು.
I ಹರೀಶ್, ಜಗಳೂರು.