ಲೋಕೇಶ್ ಎಂ. ಐಹೊಳೆ ಜಗಳೂರು: ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಪ್ರಕಟ ಮಾಡದ್ದರಿಂದ ಕಳೆದ ಮೂರು ತಿಂಗಳಿಂದ ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷರಿಲ್ಲದೇ ಬಿಕೋ ಎನ್ನುತ್ತಿದೆ.
ಹೌದು.., 18 ಸದಸ್ಯರಿರುವ ಸ್ಥಳೀಯ ಪಟ್ಟಣ ಪಂಚಾಯಿತಿಯಲ್ಲಿ 30 ತಿಂಗಳ ಮೊದಲ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅಧಿಕಾರ ಮೇ 9ರಂದು ಮುಕ್ತಾಯವಾಗಿದೆ. ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾದರೂ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಚುನಾವಣೆಗೆ ಕಾಲ ಕೂಡಿ ಬಂದಿಲ್ಲ.
ಕಳೆದ ಬಿಜೆಪಿ ಸರ್ಕಾರ ಮೀಸಲಾತಿ ಪ್ರಕಟಿಸದೆ ಮೀನಮೇಷ ಎಣಿಸಿದ್ದರಿಂದ ಮೂರು ತಿಂಗಳಿಂದ ಆಡಳಿತಾಧಿಕಾರಿಗಳ ಸುಪರ್ದಿಗೆ ಒಳಪಟ್ಟಿದೆ. ಆದ್ದರಿಂದ ಸದಸ್ಯರು ಪಪಂನತ್ತ ಸುಳಿಯುತ್ತಿಲ್ಲ. ಅಧಿಕಾರಿಗಳು ಮಾತ್ರ ಕಚೇರಿಗೆ ಸೀಮಿತರಾಗಿದ್ದಾರೆ.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸದಸ್ಯರು 2ನೇ ಅವಧಿಗೆ ಅಧಿಕಾರದ ಗದ್ದುಗೆ ಹಿಡಿಯಲು ಹವಣಿಸುತ್ತಿದ್ದಾರೆ. ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯದೇ ಕೇವಲ ಮೂಕವಿಸ್ಮಿತರನ್ನಾಗಿಸಿದೆ. ವಾರ್ಡ್‌ಗಳು ಸಮಸ್ಯೆಗಳು ಸರಮಾಲೆಯನ್ನೇ ಹೊದ್ದು ಮಲಗಿವೆ. ಕೆಲ ವಾರ್ಡ್‌ಗಳಲ್ಲಿ ರಸ್ತೆಯ ಬದಿ ಸಂಗ್ರಹವಾದ ಕಸ ತೆಗೆಯುವವರಿಲ್ಲ. ವೈಜ್ಞಾನಿಕವಾಗಿ ವಿಲೇವಾರಿ ಆಗುತ್ತಿಲ್ಲ. ನಿತ್ಯ ಸಕಾಲಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಬೀದಿ ದೀಪಗಳು ಬೆಳಗುತ್ತಿಲ್ಲ. ಹೀಗೆ ಅನೇಕ ಸಮಸ್ಯೆಗಳಿದ್ದರೂ ಅಧಿಕಾರಿಗಳು ಮಾತ್ರ ಜಾಣ ಕುರುಡರಂತಿದ್ದಾರೆ.
ಸದಸ್ಯರಲ್ಲಿ ಕುಂದಿದ ಉತ್ಸಾಹ: 2021ರ ಡಿಸೆಂಬರ್‌ನಲ್ಲಿ ಚುನಾವಣೆ ನಡೆದು ನೂತನ ಸದಸ್ಯರು ಆಯ್ಕೆಯಾಗಿದ್ದರೂ ಮೀಸಲಾತಿ ಗೊಂದಲದಿಂದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ನಿಗದಿಪಡಿಸಿ ಆಯ್ಕೆ ಮಾಡುವ ಪ್ರಕ್ರಿಯೆ ನಡೆದಿರಲಿಲ್ಲ. ಹಾಗಾಗಿ, ಸದಸ್ಯರು ಚುನಾವಣೆಯಲ್ಲಿ ಗೆದ್ದರೂ ಅಧಿಕಾರವಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಮೇ 9ಕ್ಕೆ ಅಧ್ಯಕ್ಷ-ಉಪಾಧ್ಯಕ್ಷ ಅಧಿಕಾರವಧಿ 30 ತಿಂಗಳಿಗೆ ಅಂತ್ಯವಾಗಿದೆ. 2ನೇ ಅವಧಿಗೆ ಚುನಾವಣೆ ನಡೆಯಬೇಕಿದ್ದು ಸರ್ಕಾರ ಇನ್ನೂ ಮೀಸಲಾತಿ ಪ್ರಕಟಿಸುತ್ತಿಲ್ಲ.
ಅಧ್ಯಕ್ಷ-ಉಪಾಧ್ಯಕ್ಷರು ಇಲ್ಲದ ಕಾರಣ ಪಟ್ಟಣ ಪಂಚಾಯಿತಿ ಆಡಳಿತ ಲಗಾಮು ಇಲ್ಲದ ಕುದುರೆಯಂತಾಗಿದೆ. ಮೂರು ತಿಂಗಳಿಂದ ಯಾವುದೇ ಮಾಹಿತಿ ಸಿಗುತ್ತಿಲ್ಲ. ಸದಸ್ಯರೆಂದರೆ ಲೆಕ್ಕಕ್ಕಿಲ್ಲದಂತಾಗಿದ್ದು, ಅಧಿಕಾರಿಗಳದ್ದೇ ದರ್ಬಾರ್ ಆಗಿದೆ. ಸರ್ಕಾರ ತಕ್ಷಣವೇ ಮೀಸಲಾತಿ ಪ್ರಕಟಿಸಬೇಕು.
l ರಮೇಶ್, ಪಪಂ ಸದಸ್ಯ
ಪ್ರತಿ ವಾರ್ಡ್‌ಗಳಲ್ಲೂ ಸಮಸ್ಯೆಗಳಿದ್ದು, ಆಲಿಸುವವರಿಲ್ಲದಂತಾಗಿದೆ. ಶಾಂತಿ ಸಾಗರದ ನೀರು ಮಾತ್ರ ಸಮರ್ಪಕವಾಗಿ ಪೂರೈಕೆಯಾಗುತ್ತಿದೆ. ಸ್ವಚ್ಛತೆ ಕಾಣುತ್ತಿಲ್ಲ. ರಸ್ತೆಗಳೆಲ್ಲ ತಗ್ಗು ಗುಂಡಿಗಳು ಬಿದ್ದಿವೆ. ಸಮಸ್ಯೆ ತಿಳಿಸಲು ಅಧ್ಯಕ್ಷರಿಲ್ಲ, ಅಧಿಕಾರಿಗಳು ಅಧ್ಯಕ್ಷರ ಮೇಲೆ ಬೆರಳು ತೋರಿಸುತ್ತಾರೆ.
l ಮಹಮದ್ ಭಾಷಾ. ಹೋರಾಟಗಾರ