ಜಿಲ್ಲೆ

ಜಗಳೂರಲ್ಲಿ ನೂರಾರು ಎಕರೆ ಬೆಳೆ ಹಾನಿ

Davangere - Desk - Basavaraja P

ವಾರದಿಂದ ಧಾರಾಕಾರ ಮಳೆ I ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಎಚ್. ಶ್ವೇತಾ ಮಾಹಿತಿ

ಜಗಳೂರು: ತಾಲೂಕಿನಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ 100ಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಎಚ್. ಶ್ವೇತಾ ತಿಳಿಸಿದ್ದಾರೆ.

ಅ. 14ರಿಂದ ತಾಲೂಕಾದ್ಯಂತ ಮಳೆ ಆರಂಭವಾಗಿದ್ದು ನಿರಂತರವಾಗಿ ಸುರಿಯುತ್ತಿದೆ. ಕಳೆದ ಒಂದು ವಾರದಲ್ಲಿ ರೈತರಿಗೆ ಮುಖದಲ್ಲಿ ಮಂದಹಸಾಸ ಮೂಡಿದರೆ, ಮತ್ತೊಂದೆಡೆ ಆತಂಕ ಶುರುವಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಹಾ ಮಳೆಗೆ ಸೊಕ್ಕೆ, ಕಸಬಾ ಮತ್ತು ಬಿಳಿಚೋಡು ಹೋಬಳಿಗಳಲ್ಲಿ ಸಾಕಷ್ಟು ಪ್ರಮಾಣದ ಬೆಳೆಹಾನಿ ಸಂಭವಿಸಿದೆ.

ಕಸಬಾ ಹೋಬಳಿಯ ಭರಮಸಮುದ್ರ, ನಿಬಗೂರು, ಹುಚ್ಚವ್ವನಹಳ್ಳಿ, ದೊಣೆಹಳ್ಳಿ ಹಿರೇಮಲ್ಲನಹೊಳೆ, ಚಿಕ್ಕಮಲ್ಲನಹೊಳೆ ಕಾನನಕಟ್ಟೆ, ಕಮಂಡಲಗುಂದಿ ಗ್ರಾಮಗಳಲ್ಲಿ ಒಟ್ಟು 19 ಹೆಕ್ಟೇರ್ ಮೆಕ್ಕೆಜೋಳ, ಎರಡು ಹೆಕ್ಟೇರ್ ರಾಗಿ, ಎರಡು ಹೆ. ಹತ್ತಿ, ಎರಡು ಹೆ. ಶೇಂಗಾ ಸೇರಿ 25 ಹೆಕ್ಟೇರ್ ಬೆಳೆ ನಾಶವಾಗಿದೆ.

ಸೊಕ್ಕೆ ಹೋಬಳಿಯ ಗೌಡಗೊಂಡನಹಳ್ಳಿ, ತಮಲೇಹಳ್ಳಿ, ಹೊಸಕೆರೆ, ಚಿಕ್ಕಬನ್ನಿಹಟ್ಟಿ, ಉಜ್ಜಪ್ಪ ಒಡೇರಹಳ್ಳಿ ಗ್ರಾಮಗಳಲ್ಲಿ 25 ಹೆ. ಮೆಕ್ಕೆಜೋಳ, ಎರಡು ಹೆ. ರಾಗಿ, ಎರಡು ಹೆ. ಹತ್ತಿ, ಒಂದು ಹೆ. ಶೇಂಗಾ ಸೇರಿ 30 ಹೆಕ್ಟೇರ್ ಬೆಳೆ ನಾಶವಾಗಿದೆ.

ಬಿಳಿಚೋಡು ಹೋಬಳಿಯ ದಿದ್ದಿಗೆ, ಚದರಗೊಳ್ಳ, ಗುತ್ತಿದುರ್ಗ, ದೇವಿಕೆರೆ ಗ್ರಾಮಗಳಲ್ಲಿ 16 ಹೆ. ಮೆಕ್ಕೆಜೋಳ, ಒಂದು ಹೆ.ರಾಗಿ, ಎರಡು ಹೆ. ಹತ್ತಿ, ಒಂದು ಹೆ. ಶೇಂಗಾ ಒಟ್ಟು 20 ಹೆಕ್ಟೇರ್ ಬೆಳೆ ನೀರಿನಲ್ಲಿ ಮುಳುಗಿ ಹಾಳಾಗಿವೆ ಎಂದು ಮಾಹಿತಿ ನೀಡಿದರು.