ಜಿಲ್ಲೆ

ಪಾಲಕರು ಹೋಗುವಷ್ಟರಲ್ಲಿ ಬಿದ್ದಿತ್ತು ಪುತ್ರನಿಗೆ ಯಮಪಾಶ

ಜಗಳೂರು: ಪಾಲಕರು ಬಾರದಿದ್ದರಿಂದ ಮನನೊಂದ ಮೊರಾರ್ಜಿ ಶಾಲೆ ವಿದ್ಯಾರ್ಥಿ ಮಂಗಳವಾರ ಸಂಜೆ ಶೌಚಗೃಹದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೆದಗಿನಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿ ಎಸ್.ಸುನೀಲ್ (12) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಸಾಗಲಗಟ್ಟೆ ಗ್ರಾಮದ ಕೆ.ಎಚ್. ಸುರೇಶ-ಕೆ.ಕವಿತಾ ದಂಪತಿ ಪುತ್ರ ಸುನೀಲ್ ಅನಾರೋಗ್ಯದ ಕಾರಣ ಮನೆಗೆ ಮರಳಿದ್ದ.

ಸೋಮವಾರವಷ್ಟೇ ವಸತಿ ಶಾಲೆಗೆ ಮರಳಿದ್ದು, ಮಂಗಳವಾರ ಮತ್ತೆ ಪಾಲಕರಿಗೆ ಬರುವಂತೆ ಕರೆದಿದ್ದು, ಅವರು ನಾಳೆ ಬರುವುದಾಗಿ ಹೇಳಿದ್ದಾರೆ. ಇದರಿಂದ ಬೇಸರಗೊಂಡ ಸುನೀಲ್ ವಸಿ ಶಾಲೆ ಶೌಚಗೃಹದಲ್ಲಿ ಕಿಟಕಿಗೆ ನೇಣು ಹಾಕಿಕೊಂಡಿದ್ದಾನೆ.

ಸುನೀಲ್ ಕಾಣದಿದ್ದಾಗ ಪ್ರಾಚಾರ್ಯರು ಮತ್ತು ವಾರ್ಡನ್ ಹುಡುಕಾಡಿದ್ದು, ಶೌಚಗೃಹದಲ್ಲಿ ನೇಣು ಹಾಕಿಕೊಂಡಿರುವುದು ಕಂಡು ಬಂದಿದೆ. ತಕ್ಷಣವೇ ಕಾರಿನಲ್ಲಿ ಜಗಳೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸ್ಪತ್ರೆಯಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಜಿಲ್ಲಾಧಿಕಾರಿ ಶಿವಾನಂದ ಕಪಾಶಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಡಿ.ರೇಷ್ಮಾ ಕೌಸರ್, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ಸಿಪಿಐ ಸತ್ಯನಾರಾಯಣ, ತಹಶಿಲ್ದಾರ್ ಜಿ.ಸಂತೋಷ್ ಕುಮಾರ್, ಜಗಳೂರು ಪಿಎಸ್‌ಐ ಮಹೇಶ ಹೊಸಪೇಟೆ ಆಸ್ಪತ್ರೆಗೆ ಭೇಟಿ ನೀಡಿದ್ದರು.

ಬೇಸರಗೊಂಡಿದ್ದ ಬಾಲಕ
ಈ ಹಿಂದೆ ಮುಗ್ಗಿದರಾಗಿಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ಓದುತ್ತಿದ್ದ ಸುನೀಲ್‌ನನ್ನು ಪಾಲಕ ಮನವಿ ಮೇರೆಗೆ ಮೆದಗಿನಕೆರೆ ವಸತಿ ಶಾಲೆಗೆ ದಾಖಲಿಸಲಾಗಿತ್ತು. ಕಳೆದೊಂದು ವಾರದ ಹಿಂದೆ ಅನಾರೋಗ್ಯದ ಹಿನ್ನೆಲೆ ಪಾಲಕರು ಸಾಗಲಟ್ಟೆ ಗ್ರಾಮಕ್ಕೆ ಕರೆದೊಯ್ದಿದ್ದರು. ಸೋಮವಾರ ಮತ್ತೆ ಶಾಲೆಗೆ ಬಿಟ್ಟು ಹೋಗಿದ್ದರು. ಮಂಗಳವಾರ ಸಂಜೆ ಪಾಲಕರಿಗೆ ಕರೆ ಮಾಡಿ ಕರೆದುಕೊಂಡು ಹೋಗುವಂತೆ ಕೋರಿದ್ದಾನೆ. ಇನ್ನೇನು ಪಾಲಕರು ನಾಳೆ ಹೋಗಬೇಕು ಎನ್ನುವಷ್ಟರಲ್ಲಿ ಸುನೀಲ್ ಶಾಶ್ವತವಾಗಿ ದೂರವಾಗಿದ್ದಾನೆ.