ಜಿಲ್ಲೆ

ಒಳಮೀಸಲಿನಿಂದ ಮಾದಿಗ ಸಮಾಜಕ್ಕೆ ನ್ಯಾಯ

Davangere - Desk - Basavaraja P

ಷಡಕ್ಷರಿಮುನಿ ದೇಶಿಕೇಂದ್ರ ಸ್ವಾಮೀಜಿ ಅನಿಸಿಕೆ I ಜಗಳೂರಿನಲ್ಲಿ ಸನ್ಮಾನ ಸಮಾರಂಭ

ಜಗಳೂರು: ಶತಮಾನಗಳಿಂದ ತುಳಿತಕ್ಕೆ ಒಳಗಾದ ಮಾದಿಗ ಸಮಾಜಕ್ಕೆ ಸಾಮಾಜಿಕ ನ್ಯಾಯ ಸಿಗಬೇಕಾದರೆ ಒಳಮೀಸಲು ಅನುಷ್ಠಾನಗೊಳ್ಳಬೇಕು. ಸರ್ಕಾರಗಳು ಕೂಡ ಜಾರಿಗೊಳಿಸಲು ಮುಂದಾಗಬೇಕು ಎಂದು ಹಿರಿಯೂರು ಕೋಡಿಹಳ್ಳಿಯ ಆದಿಜಾಂಬವ ಬೃಹನ್ಮಠದ ಷಡಕ್ಷರಿಮುನಿ ದೇಶಿಕೇಂದ್ರ ಸ್ವಾಮೀಜಿ ಒತ್ತಾಯಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸೋಮವಾರ ಆದಿಜಾಂಬವ ಮಾದಿಗ ಸಮಾಜ ಸೇವಾ ಸಂಘದಿಂದ ಸಮಾಜದ ಗಣ್ಯರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಈ ಭೂಮಿಯಲ್ಲಿ ಮೂಲ ನಿವಾಸಿಗಳಾದ ಮಾದಿಗ ಸಮುದಾಯವನ್ನು ಅಸ್ಪಶ್ಯತೆಯಿಂದಲೇ ಕಾಣುವ ಮೂಲಕ ಶೋಷಣೆ ಮಾಡಿದ್ದಾರೆ. ಈಗಿನ ಆಧುನಿಕ ಯುಗದಲ್ಲೂ ಜಾತೀಯತೆ ನಿರ್ಮೂಲನೆಯಾಗಿಲ್ಲ. ಯಾವುದೇ ಕ್ಷೇತ್ರದಲ್ಲಿ ನಮ್ಮ ಸಮುದಾಯ ಮುಂಚೂಣಿಯಲ್ಲಿಲ್ಲ. ಆದರೆ, ಎಸ್ಸಿ ಮತ್ತಿತರ ಸಮುದಾಯಗಳಿಗೆ ಇರುವ ಗೌರವ ನಮ್ಮವರಿಗಿಲ್ಲವೆಂದು ಬೇಸರಪಟ್ಟರು.

ಒಳಮೀಸಲು ನಿಜವಾಗಿ ಮಾದಿಗ ಸಮುದಾಯಕ್ಕೆ ತುಂಬ ಅವಶ್ಯವಿದೆ. ಆದರೆ, ನಮಗೆ ಸಿಗಬೇಕಾದ ಮೀಸಲಾತಿ ಪಡೆದುಕೊಳ್ಳಲು ಸಹೋದರ ಸಮುದಾಯಗಳು ವಿರೋಧಿಸುತ್ತಿರುವುದು ಎಷ್ಟು ಸರಿ? ನಮ್ಮಂತೆ ಅವರು ಹೀನಾಯ ಸ್ಥಿತಿಯಲ್ಲಿದ್ದಾರೆ ಎಂದರು.

ಅಸ್ಪಶ್ಯತೆ, ಸಮಾನತೆ, ಜಾತಿ ತಾರತಮ್ಯ ಹೋಗಲಾಡಿಸಲು ಶಿಕ್ಷಣವೆಂಬ ಅಸ್ತ್ರ ಹಿಡಿಯಬೇಕು. ಹಾಗಾಗಿ, ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಬುದ್ಧಿವಂತರನ್ನಾಗಿ ಮಾಡಿ, ಆಸ್ತಿ ಗಳಿಕೆಗಿಂತ ಶಿಕ್ಷಣ ಕೊಡಿ ಎಂದರು.

ಅಂಬೇಡ್ಕರ್ ಹೇಳಿದಂತೆ ಶಿಕ್ಷಣವೆಂಬುದು ಹುಲಿ ಹಾಲಿದ್ದಂತೆ. ಅದನ್ನು ಕುಡಿದವನು ಘರ್ಜಿಸಲೇಬೇಕು. ಶಿಕ್ಷಣ ಸಂಘಟನೆ ಹೋರಾಟದ ಮೂಲಕ ಒಳಮೀಸಲು ಜತೆ ಸಮಾನತೆ, ಆರ್ಥಿಕತೆ ಬಲಿಷ್ಠಗೊಳ್ಳಲು ಸಹಕಾರಿಯಾಗಲಿದೆ ಎಂದರು.

ಮಾಜಿ ಸಂಸದ ಎ. ನಾರಾಯಣಸ್ವಾಮಿ ಮಾತನಾಡಿ, ಮಾದಿಗ ಸಮುದಾಯಕ್ಕೆ ಒಳಮೀಸಲು ನೀಡುವುದಾಗಿ ಎಲ್ಲ ಪಕ್ಷಗಳು ನಂಬಿಸಿ, ಮೋಸ ಮಾಡುತ್ತಿವೆ. ಮಾದಿಗರನ್ನು ಕೇವಲ ಮತ ಬ್ಯಾಂಕ್ ಮಾಡಿಕೊಂಡು ಗೆದ್ದ ಬಳಿಕ ಸಮುದಾಯ ಪರವಾಗಿ ಯಾರೂ ವಿಧಾನಸೌಧ ಹಾಗೂ ಲೋಕಸಭೆಯಲ್ಲಿ ಧ್ವನಿ ಎತ್ತದೇ ಇರುವುದು ನಮ್ಮ ದೌರ್ಭಾಗ್ಯ ಎಂದು ಬೇಸರಪಟ್ಟರು.

ಆದಿಜಾಂಬವ ಅಭಿವೃದ್ಧಿ ನಿಗಮ ಅಧ್ಯಕ್ಷ ಜಿ.ಎಸ್. ಮಂಜುನಾಥ ಮಾತನಾಡಿ, ಮಾದಿಗರು ನೂರಾರು ಸಂಘಟನೆ ಮಾಡಿಕೊಂಡು ಸಮುದಾಯ ಒಗ್ಗೂಡಿಸುವ ಬದಲಾಗಿ ಒಡೆದಿಟ್ಟಿದ್ದಾರೆ. ಮಾದಿಗರು ಸಂಖ್ಯೆಯಲ್ಲಿ 3 ಸ್ಥಾನದಲ್ಲಿದ್ದರೂ ರಾಜಕೀಯ ಕ್ಷೇತ್ರದಲ್ಲಿ ಸಮುದಾಯದ ಶಾಸಕರು, ಸಚಿವರು, ಜಿಲ್ಲಾ ಮತ್ತು ತಾಪಂ ಸದಸ್ಯರು ಕೇವಲ ಬೆರಳೆಣಿಕೆ ಮಾತ್ರ. ಕಾರಣ ಮಾದಿಗರಲ್ಲಿ ಒಗ್ಗಟ್ಟಿನ ಕೊರತೆ ಜತೆಗೆ ಆರ್ಥಿಕತೆಯಲ್ಲಿ ದುರ್ಬಲರಾಗಿರುವುದು ಸಹ ಒಂದು ಕಾರಣ ಎಂದರು.

ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಮಾತನಾಡಿ, ಅಂಬೇಡ್ಕರ್ ಸಂವಿಧಾನದ ಮೂಲಕ ಮೀಸಲನ್ನು ಒದಗಿಸಿದ್ದಾರೆ. ಸಂಪೂರ್ಣವಾಗಿ ಪಡೆದುಕೊಳ್ಳುವುದು ನಮ್ಮ ಕರ್ತವ್ಯ. ಬೇಡರು, ಮಾದಿಗರ ನಡುವೆ ಮೊದಲಿಂದಲೂ ಅವಿನಾಭಾವ ಸಂಬಂಧವಿದೆ ಎಂದರು.

ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರಪ್ಪ, ಎಚ್.ಪಿ. ರಾಜೇಶ್, ಬ್ರಾಹ್ಮಣ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಜಿಪಂ ಮಾಜಿ ಸದಸ್ಯ ಕೆ.ಪಿ. ಪಾಲಯ್ಯ ಮಾತನಾಡಿದರು.

ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ ಹಾಗೂ ಡಾ.ಬಾಬುಜಗಜೀವನ್ ರಾಮ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡಗಿ ನಾಗರಾಜ್, ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ ಅವರನ್ನು ಗೌರವಿಸಲಾಯಿತು.

ಆದಿಜಾಂಬವ ಮಾದಿಗ ಸಮಾಜದ ತಾಲೂಕಾಧ್ಯಕ್ಷ ಜಿ.ಎಚ್. ಶಂಭುಲಿಂಗಪ್ಪ, ಪಪಂ ಸದಸ್ಯರಾದ ನಿರ್ಮಲಾ ಕುಮಾರಿ, ದೇವರಾಜ್, ಪಪಂ ಮಾಜಿ ಅಧ್ಯಕ್ಷ ಮಂಜುನಾಥ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಮಾದಿಗ ಸಮಾಜದ ಮುಖಂಡರಾದ ಗ್ಯಾಸ್ ಓಬಣ್ಣ, ಹನುಮಂತಾಪುರ ಶಿವಣ್ಣ, ಪೂಜಾರಿ ಸಿದ್ದಪ್ಪ, ಗುತ್ತಿದುರ್ಗ ರುದ್ರೇಶ್, ಬಿಳಿಚೋಡು ಹಾಲೇಶ್, ಸತೀಶ್ ಮಲೆಮಾಚಿಕರೆ, ಮುಖಂಡ ಪಲ್ಲಾಗಟ್ಟೆ ಶೇಖರಪ್ಪ, ದೊಣ್ಣೆಹಳ್ಳಿ ಗ್ರಾಪಂ ಅಧ್ಯಕ್ಷ ತಿಪ್ಪೇಸ್ವಾಮಿ ಇತರರಿದ್ದರು.