ಜಿಲ್ಲೆ

ಮದಕರಿ ನಾಯಕರ ಪುತ್ಥಳಿ ಪ್ರತಿಷ್ಠಾಪಿಸಿ

Davangere - Desk - Basavaraja P

ಹೋರಾಟಗಾರ ಆರ್.ಓಬಳೇಶ್ ಒತ್ತಾಯ I ಜಗಳೂರಲ್ಲಿ ಜಯಂತ್ಯುತ್ಸವ

ಜಗಳೂರು: ಪಟ್ಟಣದ ಚಳ್ಳಕೆರೆ ಬೈಪಾಸ್ ರಸ್ತೆಯ ವೃತ್ತದಲ್ಲಿ ಚಿತ್ರದುರ್ಗದ ವೀರ ಮದಕರಿ ನಾಯಕ ಅವರ ಪುತ್ಥಳಿ ಪ್ರತಿಷ್ಠಾಪಿಸಬೇಕು ಎಂದು ಪ್ರಗತಿಪರ ಹೋರಾಟಗಾರ ಆರ್. ಓಬಳೇಶ್ ಒತ್ತಾಯಿಸಿದರು.

ಪಟ್ಟಣದ ಚಳ್ಳಕೆರೆ ವೃತ್ತದಲ್ಲಿ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ವೀರಮದಕರಿ ನಾಯಕ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಜಗಳೂರು ಎಸ್‌ಟಿ ಮೀಸಲು ಕ್ಷೇತ್ರವಾಗಿದ್ದು, ಮೂವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ, ನಾಯಕ ಸಮಾಜಕ್ಕೆ ಸೇರಿದ ರಾಜ ವೀರಮದಕರಿ ನಾಯಕನ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಬೇಕು. ಅವರ ಹೋರಾಟ, ಯುದ್ಧ ನೈಪುಣ್ಯ ಹೊಂದಿದ್ದ ನಾಯಕನ ಪುತ್ಥಳಿ ನಿರ್ಮಿಸುವ ಬಗ್ಗೆ ಯಾರೂ ಚಕಾರ ಎತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಚಿತ್ರದುರ್ಗ ಪಾಳೆಗಾರರು ನಾಡಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಜಗಳೂರು ಕೆರೆ ನಿರ್ಮಿಸಿ ಅಂತರ್ಜಲ ವೃದ್ಧಿಸಿದ್ದಾರೆ. ಕಣ್ವಕುಪ್ಪೆ ಕೋಟೆಯಲ್ಲಿ ಪುಷ್ಕರಣಿ, ಕೋಟೆ ನಿರ್ಮಾಣ ಮಾಡಿದ್ದಾರೆ. ಅವರ ನೆನಪಿಗಾಗಿ ಮದಕರಿ ನಾಯಕನ ಹೆಸರನ್ನು ರಸ್ತೆಗೆ ಇಡಬೇಕು. ಜತೆಗೆ ಪುತ್ಥಳಿ ಸ್ಥಾಪಿಸಬೇಕು ಎಂದು ಮನವಿ ಮಾಡಿದರು.

ಉಪನ್ಯಾಸಕ ಪ್ರಸನ್ನಕುಮಾರ್ ಮಾತನಾಡಿ, ಚಿತ್ರದುರ್ಗದಲ್ಲಿ ಮದಕರಿ ನಾಯಕ ದೊಡ್ಡ ಸಾಮ್ರಾಜ್ಯ ಹೊಂದಿದ್ದರು. ಎಲ್ಲ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದರು. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಕೊಡುಗೆ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ನಾಯಕ ಸಮಾಜದ ಮುಖಂಡರಾದ ಚಿಕ್ಕಮ್ಮನಹಟ್ಟಿ ಮಂಜುನಾಥ್, ಮರೇನಹಳ್ಳಿ ನಾಗರಾಜ್, ಶಿಕ್ಷಕ ಲೋಕೇಶ್, ರೇವಣ್ಣ, ಮಾದಿಹಳ್ಳಿ ಮಂಜುನಾಥ್, ತಿಮ್ಮೇಶ್, ಕಾರ್ತಿಕ್, ರಾಜಪ್ಪ ವ್ಯಾಸಗೊಂಡನಹಳ್ಳಿ, ಬಿ.ಲೋಕೇಶ್, ಮರೇನಹಳ್ಳಿ ಶಿವಕುಮಾರ್ ಇತರರಿದ್ದರು.