ಜಿಲ್ಲೆ

ಬರಿದಾದ ಗಡಿಮಾಕುಂಟೆ ಕೆರೆಗೆ ಜೀವಂತಿಕೆ ತಂದ ಕೃತಿಕಾ

ಜಗಳೂರು: ಹತ್ತಾರು ವರ್ಷಗಳಿಂದ ನೀರೇ ಕಾಣದ ಗಡಿಮಾಕುಂಟೆ ಕೆರೆಗೆ ಭಾನುವಾರ ರಾತ್ರಿ ಸುರಿದ ಕೃತಿಕಾ ಮಳೆಯಿಂದ ಅಲ್ಪ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ.

ಜಗಳೂರು- ಉಜ್ಜಯಿನಿ ಗಡಿಯಲ್ಲಿರುವ ಗಡಿಮಾಕುಂಟೆ ದೊಡ್ಡ ಕೆರೆ. ಎರಡು ದಶಕಗಳಿಂದ ಅದರ ಒಡಲು ಖಾಲಿಯಾಗಿ ಬರಡಾಗಿತ್ತು. ಬರಗಾಲದಿಂದ ಸುತ್ತಲಿನ ಜನ, ಜಾನುವಾರುಗಳು ಕುಡಿಯುವ ನೀರಿಗಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು.

ಈಗ ತೊರೆಸಾಲು, ಅಣಬೂರು, ಕ್ಯಾಸೇನಹಳ್ಳಿ, ಗಡಿಮಾಕುಂಟೆ, ಚಿಕ್ಕಬನ್ನಿಹಟ್ಟಿ, ಹೊಸಕೆರೆ ಮತ್ತಿತರ ಹಳ್ಳಿಗಳಲ್ಲಿ ಅಂದಾಜು ಶೇ. 60 ಮಿ.ಮೀ. ಮಳೆಯಾಗಿದೆ. ಜಮೀನುಗಳ ಒಡ್ಡು, ಗೋಕಟ್ಟೆ, ಗುಂಡಿಗಳಲ್ಲಿ ನೀರು ಸಂಗ್ರಹವಾಗಿದ್ದು ಕೆರೆಗೆ ಜೀವ ಕಳೆ ಬಂದಿದೆ. ಜಾಲಿ, ಪೊದೆಗಳಿಂದ ತುಂಬಿಕೊಂಡಿದ್ದ ಕೆರೆಯಲ್ಲಿ ಜಲರಾಶಿ ಕಂಗೊಳಿಸುತ್ತಿದೆ. ಇದು ಗ್ರಾಮಸ್ಥರಲ್ಲಿ ಸಂತಸ ತಂದಿದೆ.

ಚೆಕ್‌ಡ್ಯಾಂಗಳತ್ತ ಜನರ ದಂಡು: ಜಗಳೂರು ತಾಲೂಕಿನಲ್ಲಿ ಭಾನುವಾರ ರಾತ್ರಿ 14.5 ಮಿ.ಮೀ. ಮಳೆಯಾಗಿದೆ. ಕೆಲವೆಡೆ ಉತ್ತಮ ಮಳೆ ಪರಿಣಾಮ ಚೆಕ್ ಡ್ಯಾಂಗಳು ಭರ್ತಿಯಾಗಿದ್ದು ಜನರು ಅದನ್ನು ನೋಡಲು ಧಾವಿಸುತ್ತಿದ್ದಾರೆ. ಕ್ಯಾಸೇನಹಳ್ಳಿ ಕೆರೆಗೆ ಅರ್ಧದಷ್ಟು ನೀರು ಬಂದಿದೆ. ಮರಿಕಟ್ಟೆಯಿಂದ ಗಡಿಮಾಕುಂಟೆ ಮಾರ್ಗವಾಗಿ ಕೆಲವು ಚೆಕ್‌ಡ್ಯಾಂ, ತುಮ್ಮಿನಕಟ್ಟೆ ಹಳ್ಳ, ಗೌರಿಪುರ ಹಳ್ಳದ ಮಾರ್ಗದಲ್ಲಿ ಇತರೆ ಐದು ಚಿಕ್ಕ ಚೆಕ್‌ಡ್ಯಾಂಗಳು ಜಲಾಗಾರವಾಗಿವೆ. ನೀರು ಭರ್ತಿಯಾದ ಬೆನ್ನಲ್ಲೇ ರೈತರ ಮುಖದಲ್ಲಿ ಹರ್ಷ ಮೂಡಿದೆ.

ಮಾಜಿ ಶಾಸಕ ಗುರುಸಿದ್ದನಗೌಡರ ಕಾಲದಲ್ಲಿ ಕೆರೆ ಒಡೆದಾಗ ಅಡ್ಡಲಾಗಿ ದೊಡ್ಡ ಚೆಕ್‌ಡ್ಯಾಂ ನಿರ್ಮಿಸಿದ್ದರು. ಆ ನಂತರ ಅನೇಕ ವರ್ಷಗಳಿಂದ ಖಾಲಿಯಾಗಿತ್ತು. ಈ ವರ್ಷ ಆರಂಭದ ಮಳೆಗೆ ನೀರು ಬಂದಿರುವುದು ಖುಷಿ ತಂದಿದೆ. ಆದರೆ, ಕೆರೆ ಏರಿ ಬಿರುಕು ಬಿಡುತ್ತಿರುವುದು ಆತಂಕ ತಂದಿದೆ. ಶಾಸಕ ಬಿ. ದೇವೇಂದ್ರಪ್ಪ ಅವರು ಭೇಟಿ ನೀಡಿ ಪರಿಶೀಲಿಸಿ, ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೆರೆ ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
l ಯು.ಜಿ ಶಿವಕುಮಾರ್, ರೈತ, ಗಡಿಮಾಕುಂಟೆ.

ಕಳೆದ ವರ್ಷ ಮಳೆ ಕೊರತೆಯಿಂದ ಬೆಳೆಗಳು ಸಿಕ್ಕಿಲ್ಲ. ರೈತರು ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಈ ವರ್ಷವಾದರೂ ವರುಣನ ಕೃಪೆ ಇರಲಿ. ಗಡಿಮಾಕುಂಟೆ ಕೆರೆಯಲ್ಲಿ ನೀರು ಕಾಣುತ್ತಿದ್ದಂತೆ ಸುತ್ತಲಿನ ರೈತರಲ್ಲಿ ಖುಷಿ ಹೆಚ್ಚಾಗಿದೆ. ಇನ್ನೂ ಅನೇಕ ಮಳೆಗಳು ಇರುವ ಕಾರಣ ಮುಂದೆ ಕೆರೆ ಭರ್ತಿಯಾಗಲಿದೆ ಎಂಬ ವಿಶ್ವಾಸವಿದೆ. 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಆದಷ್ಟು ಬೇಗ ಪೂರ್ಣಗೊಂಡರೆ ಅನುಕೂಲವಾಗಲಿದೆ.
l
ಸಿದ್ದೇಶ್, ತಾ.ಪಂ. ಮಾಜಿ ಸದಸ್ಯರು, ಗಡಿಮಾಕುಂಟೆ,