ಜಗಳೂರು: ತಾಲೂಕಿನ ವಿವಿಧೆಡೆ ಅನಧಿಕೃತವಾಗಿ ತಲೆ ಎತ್ತಿರುವ ಪವನಯಂತ್ರಗಳಿಂದ ರೈತರು ತೊಂದರೆ ಅನುಭವಿಸುತ್ತಿದ್ದು, ಇವುಗಳನ್ನು ಅಳವಡಿಸಿದ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಟಿ. ಬಸವರಾಜ್ ಒತ್ತಾಯಿಸಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಅಧ್ಯಕ್ಷೆ ಮಂಜುಳಾ ಶಿವಾನಂದಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ಆರಂಭದಲ್ಲಿ ಬೆಟ್ಟ, ಗುಡ್ಡಗಳಲ್ಲಿ ಒಂದೆರಡು ಪವನಯಂತ್ರಗಳು ಕಾಣಿಸುತ್ತಿದ್ದವು. ಆದರೆ ಈಗ ರೈತರಿಗೆ ಹಣದ ಆಮಿಷ ತೋರಿಸಿ ಜಮೀನುಗಳಲ್ಲಿ ಅಳವಡಿಸಲಾಗುತ್ತಿದೆ. ಇದರಿಂದ ಅಕ್ಕಪಕ್ಕದ ಜಮೀನಿನ ರೈತರು ಆತಂಕಗೊಂಡಿದ್ದಾರೆ. ಇವುಗಳನ್ನು ಅಳವಡಿಸಲು ಪರವಾನಗಿ ನೀಡಿದ್ಯಾರು? ಇದರ ಹಿಂದೆ ದೊಡ್ಡ ಗುಂಪಿದ್ದು, ತಕ್ಷಣವೇ ತಾಲೂಕು ಆಡಳಿತ ವಿಶೇಷ ಪ್ರಕರಣವೆಂದು ಪರಿಗಣಿಸಿ ತನಿಖೆ ನಡೆಸಬೇಕೆಂದು ಮನವಿ ಮಾಡಿದರು.
ಗ್ರಾಮೀಣ ಭಾಗದ ಸಂಪರ್ಕ ರಸ್ತೆಗಳು ಸಾಕಷ್ಟು ಹದಗೆಟ್ಟಿವೆ. ಇವುಗಳನ್ನು ಸರಿಪಡಿಸದೇ ಚನ್ನಾಗಿರುವ ರಸ್ತೆಗಳನ್ನು ಕಿತ್ತು ಹೊಸದಾಗಿ ನಿರ್ಮಿಸುತ್ತಿದ್ದು, ಇದರಿಂದ ಸರ್ಕಾರಕ್ಕೆ ನಷ್ಟವಾಗುತ್ತದೆ ಎಂದರು.
ಇದಕ್ಕೆ ಪಿಡಬ್ಬುೃಡಿ ಎಇಇ ರುದ್ರಪ್ಪ ಪ್ರತಿಕ್ರಿಯಿಸಿ, ಪಿಎಂಜಿಎಸ್‌ವೈ ಯೋಜನೆಯ ರಸ್ತೆಯಾಗಿರುವುದರಿಂದ ಇಲಾಖೆಗೆ ಅನ್ವಯಿಸದು ಎಂದು ತಿಳಿಸಿದರು.
ತಿಮ್ಮಾಬೋವಿ ಮಾತನಾಡಿ, ಅಧಿಕಾರಿಗಳ ವಿಳಂಬದಿಂದ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಕೆಲಸ ಮಾಡಿ ಮೂರ್ನಾಲ್ಕು ತಿಂಗಳಾದರೂ ಬಿಲ್‌ಪಾಸ್ ಮಾಡುತ್ತಿಲ್ಲ ಎಂದು ಹೇಳಿದರು.
ಜಿಪಂ ಇಂಜಿನಿಯರ್ ನಂದೀಶ್ ಕಚೇರಿಗೆ ಬರುತ್ತಿಲ್ಲ, ಕೈಗೂ ಸಿಗುತ್ತಿಲ್ಲ. ಹೀಗಾದರೆ ಅಭಿವೃದ್ಧಿ ಹೇಗೆ ಎಂದು ಸದಸ್ಯರು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಎಇಇ ಶಿವಕುಮಾರ್, ಈಗಾಗಲೇ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರಾಜ್ ಮಾತನಾಡಿ, ಕರೊನಾ ಸೋಂಕಿತ ವ್ಯಕ್ತಿಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಲಾಗುವುದು. ಉಸಿರಾಟ ಇತರೆ ತೊಂದರೆಗಳಿದ್ದರೆ ಮಾತ್ರ ಜಿಲ್ಲಾಸ್ಪತ್ರೆಗೆ ಕಳಿಸಲಾಗುವುದು. ಸಣ್ಣ ಪುಟ್ಟ ಸಮಸ್ಯೆಗಳಿದ್ದರೆ ಮನೆಯಲ್ಲಿದ್ದುಕೊಂಡು ಚಿಕಿತ್ಸೆ ಪಡೆದುಕೊಳ್ಳಬಹುವುದು ಎಂದು ತಿಳಿಸಿದರು.
ನೆಡುತೋಪಿನಲ್ಲಿ ಗೋಲ್‌ಮಾಲ್: ಅರಣ್ಯ ಇಲಾಖೆ ಕೈಗೆತ್ತಿಕೊಂಡಿರುವ ನೆಡುತೋಪು ನಿರ್ಮಾಣದಲ್ಲಿ ಸಾಕಷ್ಟು ಗೋಲ್‌ಮಾಲ್ ನಡೆದಿದೆ. ರಸ್ತೆಯ ಇಕ್ಕೆಲಗಳಲ್ಲಿ ನೆಟ್ಟಿರುವ ಸಸಿಗಳು ಒಣಗುತ್ತಿವೆ. ಲಕ್ಷಾಂತರ ರೂ. ವೆಚ್ಚ ಮಾಡಿದ್ದರೂ ಕಾಳಜಿ ವಹಿಸುತ್ತಿಲ್ಲ. ಹೀಗಾದರೆ ಸಸಿಗಳ ಬೆಳವಣಿಗೆ ಹೇಗೆ? ಎಂದು ಸದಸ್ಯರು ಪ್ರಶ್ನಿಸಿದರು.
ಸಂಗೇನಹಳ್ಳಿ ಮತ್ತು ಅಣಬೂರು ನರ್ಸರಿಗಳಲ್ಲಿ ಕೂಲಿಕಾರರಿಂದ ಕೆಲಸ ಮಾಡಿಸಬೇಕೆಂಬ ನಿಯಮವಿದೆ. ಆದರೆ ಅಧಿಕಾರದ ಪ್ರಭಾವ ಬಳಸಿ ದಿನಗೂಲಿ ವಾಚರ್‌ಗಳಿಂದ ಕೆಲಸ ಮಾಡಿಕೊಳ್ಳುತ್ತಿದ್ದಾರೆ. ಅರಣ್ಯೀಕರಣ ಮಾಡುವ ಅಧಿಕಾರಿಗಳು ಬೇಕೇ ಹೊರತು ನೆಡುತೋಪು ಹೆಸರಲ್ಲಿ ಲೂಟಿ ಮಾಡುವವರು ಬೇಕಾಗಿಲ್ಲ. ತಕ್ಷಣವೇ ಅರಣ್ಯಾಧಿಕಾರಿಯನ್ನು ವರ್ಗಾವಣೆ ಮಾಡಬೇಕೆಂದು ಸದಸ್ಯರು ಪಟ್ಟು ಹಿಡಿದರು.
ಸಭೆಯಲ್ಲಿ ತಾಪಂ ಅಧ್ಯಕ್ಷೆ ಮಂಜುಳಾ ಶಿವಾನಂದಪ್ಪ, ಉಪಾಧ್ಯಕ್ಷ ಮುದೇಗೌಡ್ರ ಬಸವರಾಜಪ್ಪ, ಸದಸ್ಯರಾದ ಕುಬೇಂದ್ರಪ್ಪ, ಶಿಲ್ಪಾ ಮಂಜಣ್ಣ, ಮಮತಾ, ಕಮಲಮ್ಮ ಇದ್ದರು.