ಜಿಲ್ಲೆ

ವಿದ್ಯುತ್ ಸ್ಪರ್ಶದಿಂದ ಯುವಕ ಸಾವು

Davangere - Desk - Basavaraja P

ಜಗಳೂರು: ತಾಲೂಕಿನ ಸೊಕ್ಕೆ ಗ್ರಾಮದ ಜಮೀನಿನಲ್ಲಿದ್ದ ವಿದ್ಯುತ್ ಪರಿವರ್ತಕದ ಕಂಬದಲ್ಲಿ ಗುರುವಾರ ರಾತ್ರಿ ಕಾಣಿಸಿಕೊಂಡ ತಾಂತ್ರಿಕ ದೋಷ ಸರಿಪಡಿಸಲು ಹೋದ ಯುವಕನೊಬ್ಬ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸೊಕ್ಕೆ ಗ್ರಾಮದ ಯುವಕ ಹೇಮಂತ್‌ಗೌಡ (26) ಟಿಸಿಯಲ್ಲಿ ತಾಂತ್ರಿಕ ದೋಷ ಸರಿಪಡಿಸಲು ಕಂಬ ಏರಿದ್ದಾನೆ. ಆಗ ವಿದ್ಯುತ್ ಪ್ರವಹಿಸಿ ಕಂಬದ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ.

ರಾತ್ರಿ 10 ಗಂಟೆಯಾದರೂ ಮಗ ಮನೆಗೆ ಬಾರದ ಹಿನ್ನೆಲೆಯಲ್ಲಿ ಹೇಮಂತ್‌ಗೌಡನ ತಂದೆ ಮಂಜುನಾಥ್ ಎಲ್ಲ ಕಡೆ ಹುಡುಕಿದ್ದಾರೆ. ಶುಕ್ರವಾರ ಬೆಳಗ್ಗೆ ಜಮೀನಿಗೆ ಬಂದು ಪರೀಕ್ಷಿಸಿದಾಗ ಹೇಮಂತ್‌ಗೌಡನ ಮೃತದೇಹ ಟಿಸಿ ಕಂಬದ ಹತ್ತಿರ ಪತ್ತೆಯಾಗಿದೆ.

ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹ ಪರೀಕ್ಷೆ ನಂತರ ಅಂತ್ಯಕ್ರಿಯೆ ನೆರವೇರಿತು. ಸ್ಥಳಕ್ಕೆ ಪಿಐ ಡಿ. ಶ್ರೀನಿವಾಸ್, ಪಿಎಸ್‌ಐಗಳಾದ ಗಾದಿಲಿಂಗಪ್ಪ, ಮಂಜುನಾಥ್‌ಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.