ಜಿಲ್ಲೆ

ಬಾಲಕಾರ್ಮಿಕ ಪದ್ಧತಿ ಸಾಮಾಜಿಕ ಪಿಡುಗು

ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ ಅನಿಸಿಕೆ I ಜಗಳೂರಿನಲ್ಲಿ ದಸರಾ ಶಿಬಿರಕ್ಕೆ ಚಾಲನೆ

ಜಗಳೂರು: ಬಾಲ ಕಾರ್ಮಿಕ ಪದ್ಧತಿ ದೇಶದ ಅತಿ ದೊಡ್ಡ ಸಾಮಾಜಿಕ ಪಿಡುಗು. ಪ್ರತಿಯೊಬ್ಬರೂ ಈ ಪದ್ಧತಿ ನಿರ್ಮೂಲನೆಗೆ ಪಣ ತೊಡಬೇಕು ಎಂದು ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ ಹೇಳಿದರು.

ಪಟ್ಟಣ ಮಹಾತ್ಮ ಗಾಂಧಿ ಹಳೇ ವೃತ್ತದಲ್ಲಿ ಶನಿವಾರ ಡಾನ್‌ಬಾಸ್ಕೋ ಬಾಲ ಕಾರ್ಮಿಕರ ಮಿಷನ್, ಬೆಂಗಳೂರಿನ ಬೇಡ್ಸ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಎರಡು ದಿನಗಳ ದಸರಾ ಶಿಬಿರ ಮತ್ತು ಬಾಲಕಾರ್ಮಿಕ/ ಕಿಶೋರ ಕಾರ್ಮಿಕ ಪದ್ಧತಿ ಹಾಗೂ ಬಾಲ್ಯ ವಿವಾಹ ಮುಕ್ತ ಪ್ರದೇಶಗಳಿಗಾಗಿ ಸ್ಟಿಕ್ಕರ್ ಅಂದೋಲನಕ್ಕೆ ಚಾಲನೆ ನೀಡಿ, ಮಾತನಾಡಿದರು.

ಬಾಲ್ಯವಿವಾಹ ದೊಡ್ಡ ಸಾಮಾಜಿಕ ಪಿಡುಗಾಗಿದೆ. ಇದರಿಂದಾಗಿ ಸಾಕಷ್ಟು ದುಷ್ಪರಿಣಾಮಗಳು ಆಗುತ್ತಿವೆ. ಇದನ್ನು ಹೋಗಲಾಡಿಸಲು ಸಮಾಜದ ಎಲ್ಲರು ಕೈ ಜೋಡಿಸಬೇಕು. ತಾಯಿ ಮರಣ ಸಂಖ್ಯೆ ಹೆಚ್ಚಳಕ್ಕೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಿಸುವುದೇ ಪ್ರಮುಖ ಕಾರಣ ಎಂದರು.

ಡಾನ್‌ಬಾಸ್ಕೋ ಪ್ಯಾರ್ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಪಿಡುಗು ಹೋಗಲಾಡಿಸಲು ಶ್ರಮಿಸುತ್ತಿದ್ದು, ಈ ವರ್ಷ ವಿವಿಧ ಆಂದೋಲನಗಳ ಮೂಲಕ ಜನರಿಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.

ಪ್ರೇರಣ ಸಮಾಜ ಸೇವಾ ಸಂಸ್ಥೆಯ ಮುಖ್ಯಸ್ಥ ಫಾದರ್ ಸೇಲ್ವಿಸ್ಟರ್ ಮಾತನಾಡಿ, ಶಿಕ್ಷಣ ವಂಚಿತಳಾಗಿ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾಳೆ. ಶಿಶು ಮತ್ತು ತಾಯಿ ಮರಣ ತಪ್ಪಿಸಲು, ಹೆಣ್ಣು ಮಕ್ಕಳ ರಕ್ಷಣೆ ಮಾಡಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಡಾನ್‌ಬಾಸ್ಕೋ ಸಂಸ್ಥೆಯು ಬಾಲ್ಯ ವಿವಾಹ ವಿರೋಧಿ ವರ್ಷಾಚರಣೆ ಮಾಡಲಾಗುತ್ತಿದೆ ಎಂದರು.

ದಾವಣಗೆರೆ ಡಾನ್‌ಬಾಸ್ಕೋ ಸಂಸ್ಥೆ ನಿರ್ದೇಶಕ ಫಾದರ್ ರೆಜಿ. ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಜಿ.ಎಸ್.ಚಿದಾನಂದ, ಟಿಪಿಒ ಸುರೇಶ್ ರೆಡ್ಡಿ, ಸಿ.ಎಸ್.ಜೆಕಬ್, ತಾಲೂಕು ಸಂಯೋಜಕ ದುರುಗಪ್ಪ ಇತರರಿದ್ದರು.