ಜಗಳೂರು: ಮಕ್ಕಳಿಗೆ ಸೇವಾಭಾವ, ಸ್ವಚ್ಛತೆ, ಸಂಸ್ಕಾರ ಕಲಿಸುವ ಮೂಲಕ ಅವರನ್ನು ಸಮಾಜ ಸೇವೆಗೆ ಅಣಿಗೊಳಿಸಬೇಕು ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಆಶಿಸಿದರು.
ಗಾಂಧಿ ಜಯಂತಿ ಅಂಗವಾಗಿ ಕೊಡದಗುಡ್ಡ ಗ್ರಾಮದ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ವಚ್ಛತೆಯೇ ಸೇವಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಶಿಕ್ಷಣ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದೇವಿಕೆರೆ ಗ್ರಾಪಂ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸ್ವಚ್ಛತೆ ಕೇವಲ ಇಲಾಖೆಗಳ ಕರ್ತವ್ಯವಲ್ಲ. ಸಂವಿಧಾನದಡಿ ಬದುಕುವ ಎಲ್ಲರಿಗೂ ಹಕ್ಕು ಮತ್ತು ಕರ್ತವ್ಯ ನೀಡಲಾಗಿದೆ. ಅವುಗಳನ್ನು ತಪ್ಪದೇ ಅನುಸರಿಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರಕ್ಕೆ 500 ಮನೆಗಳು: ಕ್ಷೇತ್ರದಲ್ಲಿ ಮನೆಗಳ ಅವಶ್ಯಕತೆ ಮನಗೊಂಡು ವಸತಿ ಸಚಿವರ ಜತೆಗೆ ಈಗಾಗಲೇ ಚರ್ಚಿಸಲಾಗಿದೆ. ಇಂದಿರಾ ಆವಾಸ್ ಮತ್ತಿತರ ಯೋಜನೆಗಳಡಿ ಮೊದಲ ಹಂತದಲ್ಲಿ 500 ಮನೆಗಳನ್ನು ಮಂಜೂರು ಮಾಡುವುದಾಗಿ ಭರವಸೆ ಸಿಕ್ಕಿದೆ ಎಂದು ಶಾಸಕ ದೇವೇಂದ್ರಪ್ಪ ತಿಳಿಸಿದರು.
ವಿಎಸ್‌ಎಸ್‌ಎನ್ ಅಧ್ಯಕ್ಷ ಬಸಾಪುರ ರವಿಚಂದ್ರ ಮಾತನಾಡಿ, ಕೊಡದಗುಡ್ಡದ ದೇವಸ್ಥಾನ ಆವರಣದಲ್ಲಿ ಕೈಗೊಂಡ ಬಹುತೇಕ ಅಭಿವೃದ್ಧಿ ಕಾಮಗಾರಿ ನರೇಗಾ ಯೋಜನೆಗಳವು. ಆದರೆ, ಇತ್ತೀಚೆಗೆ ಯಾವ ಅಭಿವೃದ್ಧಿವೂ ಆಗಿಲ್ಲ ಎಂದರು.
2017ರಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಹೈಟೆಕ್ ಶೌಚಗೃಹಕ್ಕೆ ಅನುದಾನ ನೀಡಿ ಭೂಮಿ ಪೂಜೆ ಮಾಡಿದ್ದರು. ಆದರೆ, ಅಂದಿನ ಶಾಸಕ ಎಸ್.ವಿ.ರಾಮಚಂದ್ರ ಕಾಮಗಾರಿ ಮಾಡಿಸಲಿಲ್ಲ ಕ್ಷೇತ್ರಕ್ಕೆ ಅವರ ಕೊಡುಗೆ ಏನೂ ಇಲ್ಲ ಎಂದು ಟೀಕಿಸಿದರು.
ಗ್ರಾಪಂ ಸದಸ್ಯ ಗುರುಮೂರ್ತಿ ಮಾತನಾಡಿ, ದೇವಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ರಸ್ತೆ, ವಸತಿ, ಶೌಚಗೃಹ, ನಿವೇಶನ, ಕುಡಿವ ನೀರು ಮತ್ತಿತರ ಸೌಲಭ್ಯಗಳ ಕೊರತೆ ಇದೆ. ಶಾಸಕರು ಅಗತ್ಯಕ್ಕೆ ತಕ್ಕಂತೆ ಅನುದಾನ ನೀಡಿ ಅಭಿವೃದ್ಧಿಪಡಿಸುವಂತೆ ಮನವಿ ಮಾಡಿದರು.
ನರೇಗಾ ಯೋಜನೆಯ ವೈಯಕ್ತಿಕ ಕಾಮಗಾರಿಗಳ ಕಾರ್ಯಾದೇಶ ಪತ್ರವನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾ ಯಿತು. ವಿಶೇಷ ಗ್ರಾಮ ಸಭೆ ನಡೆಯಿತು.
ಇದೇ ವೇಳೆ ದೇವಿಕೆರೆ, ಮೆದಕೆರೆನಹಳ್ಳಿ ಶಾಲೆಯ ವಿದ್ಯಾರ್ಥಿಗಳು ವಿವಿಧ ಹಾಡುಗಳಿಗೆ ನೃತ್ಯ ಪ್ರದರ್ಶಿಸಿದರು. 14 ಶಾಲಾ ಮಕ್ಕಳಿಗೆ ಶಿಕ್ಷಣ ಇಲಾಖೆಯಿಂದ ಆಟದ ಕಿಟ್‌ಗಳನ್ನು ವಿತರಿಸಲಾಯಿತು.
ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್ವರಪ್ಪ, ಲೋಕೋಪಯೋಗಿ ಇಲಾಖೆ ಎಇಇ ನಾಗರಾಜ್, ಜಿಪಂ ಎಇಇ ಶಿವಮೂರ್ತಿ, ಕುಡಿಯುವ ನೀರು ಇಲಾಖೆ ಎಇಇ ಸಾಧಿಕ್ ಉಲ್ಲಾ. ಸಿಡಿಪಿಒ ಬೀರೇಂದ್ರ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ವಿಶ್ವನಾಥ್, ಪಿಡಿಒ ಸುನೀತಾ, ಮುಖಂಡರಾದ ಗುಡ್ಡಲಿಂಗನಹಳ್ಳಿ ಅಂಜಿನಪ್ಪ ಮತ್ತಿತರರಿದ್ದರು.
ಕೊಡದಗುಡ್ಡದಲ್ಲಿ ಹೈಟೆಕ್ ಶೌಚಗೃಹ: ಧಾರ್ಮಿಕ ಕ್ಷೇತ್ರ ಕೊಡದಗುಡ್ಡ ವೀರಭದ್ರಸ್ವಾಮಿ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಬರುವ ಹಿನ್ನೆಲೆಯಲ್ಲಿ ಶೌಚಗೃಹ ಅಗತ್ಯವಿದೆ ಎಂದು ದೇವಸ್ಥಾನ ಸಮಿತಿ ಗಮನಕ್ಕೆ ತಂದಿದ್ದು ಸಂಬಂಧಿತ ಅಧಿಕಾರಿಗಳ ಜತೆ ಚರ್ಚಿಸಿ ಹೈಟೆಕ್ ಶೌಚಗೃಹ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.
ಕೊಡದಗುಡ್ಡದಲ್ಲಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ 11ಲಕ್ಷ ರೂ. ನೀಡುವ ಭರವಸೆ ಕೊಟ್ಟ ಹಿನ್ನೆಲೆಯಲ್ಲಿ ಮೊದಲ ಕಂತಿನ ಹಣ ಕೊಡಲಾಗುವುದು. ಪುಣ್ಯಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.