ಜಗಳೂರು: ಬೀದಿಬದಿ ವ್ಯಾಪಾರಿಗಳಿಗೆ ಪಟ್ಟಣದ ಮಧ್ಯದಲ್ಲಿ ಮಾರುಕಟ್ಟೆ ಸ್ಥಾಪಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರ ದಾವಣಗೆರೆ ಜಿಲ್ಲಾ ಬೀದಿ ಬದಿ ಸ್ಥಿರ ಮತ್ತು ಸಂಚಾರಿ ಚಿಲ್ಲರೆ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಮಹಾತ್ಮಗಾಂಧಿ ಹಳೆ ವೃತ್ತ, ಹೊಸ ಬಸ್ ನಿಲ್ದಾಣ, ಡಾ.ಬಿ.ಆರ್ ಅಂಬೇಡ್ಕರ್ ವೃತ್ತದ ಮೂಲಕ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಅವರಿಗೆ ಮನವಿ ಸಲ್ಲಿಸಿದರು.
ಬೀದಿಬದಿ ವ್ಯಾಪಾರಸ್ಥರು ತಮ್ಮ ದುಡಿಮೆ ಜತೆಗೆ ಜನರಿಗೆ ಅನುಕೂಲವಾಗುವಂತೆ ಸಮಾಜಮುಖಿ ಕೆಲಸ ನಿರ್ವಹಿಸುತ್ತಿದ್ದಾರೆ. ಆಡಳಿತ ವರ್ಗ ಚಿಲ್ಲರೆ ವ್ಯಾಪಾರಿಗಳನ್ನು ಉತ್ತೇಜಿಸಿ ಇನ್ನಷ್ಟು ಸೇವೆಗೆ ಅವಕಾಶ ಕಲ್ಪಿಸಬೇಕು. ಆದರೆ, ಇದಕ್ಕೆ ತದ್ವಿರುದ್ಧವಾಗಿ ಬೀದಿಬದಿ ವ್ಯಾಪಾರಸ್ಥರನ್ನು ಒಕ್ಕಲಿಬ್ಬಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಖಂಡಿಸಿದರು.
ಸಂಘದ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಮಾತನಾಡಿ, ಬೀದಿಬದಿ ವ್ಯಾಪಾರಿಗಳು ತಮ್ಮ ಹೊಟ್ಟೆಪಾಡಿಗೆ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಅಧಿಕಾರಿಗಳು, ಪೊಲೀಸರು, ಜನಪ್ರತಿನಿಧಿಗಳು ದೌರ್ಜನ್ಯ ಮಾಡುವುದು ಯಾವ ನ್ಯಾಯ? ಕೂಲಿ ಮಾಡುವವರ ಮೇಲೆ ದಂಡ ವಿಧಿಸುವುದು ಸರಿಯಲ್ಲ ಎಂದರು.
ಪ್ರತಿನಿತ್ಯ ಜಕಾತಿ ಪಡೆದು ಆದಾಯ ಪಡೆದುಕೊಳ್ಳುವ ಅಧಿಕಾರಿಗಳು ವ್ಯಾಪಾರಿಗಳಿಗೆ ನೆರಳು, ನೀರು, ಶೌಚಗೃಹ ಸೇರಿ ಕನಿಷ್ಠ ಸೌಲಭ್ಯ ಕಲ್ಪಿಸಿಲ್ಲ. ಇನ್ನು ಮುಂದೆ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಮಾತನಾಡಿ, ಸರ್ಕಾರ ಮತ್ತು ಅಧಿಕಾರಿಗಳು ಇರುವುದೇ ಸಾರ್ವಜನಿಕರ ಸೇವೆಗಾಗಿ. ಯಾವುದೇ ಕೆಲಸ ಮಾಡಿದರೂ ಕಾನೂನಿನ ಅನ್ವಯ ಮಾಡಬೇಕು. ಫುಟ್ಪಾತ್ಗಳಲ್ಲಿ ಪಾದಚಾರಿಗಳು, ಸಾರಿಗೆ ಸಂಚಾರಕ್ಕೆ ಅಡ್ಡಿಯಾಗದಂತೆ ವ್ಯಾಪಾರ ನಡೆಸಬೇಕು. ಶಾಶ್ವತವಾಗಿ ಬೀದಿಗಳಲ್ಲಿ ಶೆಡ್ ಹಾಕಬಾರದು ಎಂದು ಸಲಹೆ ನೀಡಿದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಕೆ. ಭಾರತಿ, ಖಜಾಂಚಿ ಕೃಷ್ಣಪ್ಪ, ಮಂಜುಳಮ್ಮ, ಪ.ಪಂ. ಸದಸ್ಯೆ ಮಂಜಮ್ಮ, ತರಕಾರಿ ಜಯ್ಯಣ್ಣ, ತಿಪ್ಪಮ್ಮ, ಕೃಷ್ಣಪ್ಪ, ಹುಸೇನ್ ಸಾಬ್ ಇತರರಿದ್ದರು.
ಬೀದಿಬದಿ ವ್ಯಾಪಾರಿಗಳ ಬೇಡಿಕೆಗಳು: ಪಟ್ಟಣ ಪಂಚಾಯಿತಿಯೇ ಜಕಾತಿ ಪಡೆಯುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಆ ಹಣವನ್ನು ಬೀದಿಬದಿ ವ್ಯಾಪಾರಸ್ಥರ ಕಲ್ಯಾಣಕ್ಕಾಗಿ ಮೀಸಲಿಡಬೇಕು. ಜಕಾತಿ ಸಂಗ್ರಹಿಸುವ ಕೆಲಸವನ್ನು ಖಾಸಗಿಯವರಿಗೆ (ಟೆಂಡರ್) ನೀಡಬಾರದು. ಜಕಾತಿ ಪಡೆಯುವಾಗ ತಪ್ಪದೆ ಪ.ಪಂ ಮೊಹರು ಇರುವ ರಸೀದಿ ನೀಡಬೇಕು. ವ್ಯಾಪಾರಸ್ಥರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಬೇಕು. ಜಗಳೂರು ಮಧ್ಯಭಾಗದಲ್ಲಿ ಮಾರುಕಟ್ಟೆ ಸ್ಥಾಪಿಸಬೇಕು. ಶುದ್ಧ ಕುಡಿಯುವ ನೀರು, ಶೌಚಗೃಹ ವ್ಯವಸ್ಥೆ ಮಾಡಬೇಕು. 2014ರ ಬೀದಿ ಬದಿ ವ್ಯಾಪಾರಸ್ಥರ ನಿಯಂತ್ರಣ ಹಾಗೂ ಸಂರಕ್ಷಣಾ ಕಾಯ್ದೆ ಸಮರ್ಪಕವಾಗಿ ಜಾರಿಯಾಗಬೇಕು.