ಜಿಲ್ಲೆ

ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸದಸ್ಯರ ಪಟ್ಟು

ಜಗಳೂರು: ಪಟ್ಟಣದ ಅಭಿವೃದ್ಧಿಗಾಗಿ ಸದಸ್ಯರ ಗಮನಕ್ಕೆ ತರದೆ ಕ್ರಿಯಾಯೋಜನೆ ಸಿದ್ಧಪಡಿಸಿ ಅನುಮೋದನೆಗೆ ಕಳಿಸಿದ ಅಧಿಕಾರಿಗಳ ವಿರುದ್ಧ ಸೂಕ್ರ ಕ್ರಮ ಕೈಗೊಳ್ಳುವಂತೆ ಬುಧವಾರ ಏರ್ಪಡಿಸಿದ್ದ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಒತ್ತಾಯ ಕೇಳಿಬಂತು.

ಸರ್ಕಾರದಿಂದ 8 ಕೋಟಿ ರೂ. ಬಿಡುಗಡೆಯಾಗಿದ್ದು, ಇದರ ಸದ್ಬಳಕೆ ಕುರಿತು ಆಯಾ ವಾರ್ಡ್‌ಗಳ ಸದಸ್ಯರೊಂದಿಗೆ ಚರ್ಚಿಸಿ ಮುಖ್ಯ ಕಾಮಗಾರಿಗಳ ಪಟ್ಟಿ ತಯಾರಿಸಬೇಕಾಗಿತ್ತು. ಆದರೆ, ನಮ್ಮ ಗಮನಕ್ಕೆ ತರದೆ ಅಧಿಕಾರಿಗಳು ಕ್ರಿಯಾಯೋಜನೆ ಸಿದ್ಧಪಡಿಸಿದ್ದಾರೆ.

ಹಾಗಾದರೆ, ಇನ್ಮುಂದೆ ವಾರ್ಡ್‌ಗಳಲ್ಲಿ ಸಮಸ್ಯೆಗಳು ಎದುರಾದರೆ ಅದರ ಜವಾಬ್ದಾರಿ ಅಧಿಕಾರಿಗಳೇ ಹೊತ್ತುಕೊಳ್ಳಲಿ ಎಂದು ಸದಸ್ಯರಾದ ಆರ್. ತಿಪ್ಪೇಸ್ವಾಮಿ, ದೇವರಾಜ್, ರಮೇಶ್‌ರೆಡ್ಡಿ ಸೇರಿದಂತೆ ಸರ್ವ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ವಾರ್ಡ್‌ಗಳಲ್ಲೂ ರಸ್ತೆ ಗುಂಡಿ ಬಿದ್ದಿವೆ. ಚರಂಡಿಗಳಿಲ್ಲ, ಸರಿಯಾಗಿ ಬೀದಿ ದೀಪಗಳಿಲ್ಲ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿವೆ. ಹೀಗೆ ಸಮಸ್ಯೆಗಳಿರುವಾಗ ಹಣದ ವಿನಿಯೋಗದಲ್ಲಿ ಎಲ್ಲ ಸಮಸ್ಯೆಗಳಿಗೆ ಆದ್ಯತೆ ನೀಡಬೇಕಿತ್ತು ಎಂದರು.

ಪಟ್ಟಣದ ಅಂಬೇಡ್ಕರ್ ವೃತ್ತದಿಂದ ತಾಲೂಕು ಕಚೇರಿವರೆಗೂ, ಪಪಂ ಹಳೇ ಕಚೇರಿಯಿಂದ ಭುವನೇಶ್ವರಿ ವೃತ್ತದವರೆಗೂ ವಾಣಿಜ್ಯ ಮಳಿಗೆ ನಿರ್ಮಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಬೇಕು ಎಂದು ಆರ್. ತಿಪ್ಪೇಸ್ವಾಮಿ ಪ್ರಸ್ತಾಪಿಸಿದರು.

ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಮಾತನಾಡಿ, ಪಟ್ಟಣದಲ್ಲಿ ಮಹನೀಯರ ಪುತ್ಥಳಿ, ರಸ್ತೆಗೆ ಹೆಸರಿಡುವ ಬಗ್ಗೆ ಅನೇಕ ಅರ್ಜಿ ಬಂದಿವೆ. ಇವುಗಳನ್ನು ಜಿಲ್ಲಾಧಿಕಾರಿಗೆ ಕಳಿಸಿ, ಅನುಮತಿ ಸಿಕ್ಕ ಬಳಿಕ ಜಾಗ ಗುರುತಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆ ಗಮನಕ್ಕೆ ತಂದರು.

ನವೀನ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಲೋಕಮ್ಮ, ಸದಸ್ಯರಾದ ಮಂಜುನಾಥ್, ಪಾಪಲಿಂಗಪ್ಪ, ದೇವರಾಜ್, ಮಹಮದ್, ರಮೇಶ್‌ರೆಡ್ಡಿ, ಲುಕ್ಮಾನ್, ಶಕೀಲ್, ವಿಶಾಲಾಕ್ಷಿ, ಮಂಜಮ್ಮ, ಸರೋಜಮ್ಮ, ನಾಮ ನಿರ್ದೇಶಿತ ಕುರಿ ಜಯಣ್ಣ ಮತ್ತಿತರರಿದ್ದರು.

ನಿರಾಶ್ರಿತರ ಸ್ಥಳಾಂತರಕ್ಕೆ ಒತ್ತಾಯ: ಜಗಳೂರು ಕೆರೆಯಂಗಳದ ಜೋಗಪ್ಪನಗುಡಿ ಆಸುಪಾಸಿನ ಮನೆಗಳು ಜಲಾವೃತಗೊಂಡಿದ್ದು, ನಿವಾಸಿಗಳು ನಿರಾಶ್ರಿತರಾಗಿದ್ದಾರೆ. ಅಶ್ವತ್ಥ ರೆಡ್ಡಿ ಬಡಾವಣೆ ಸಮೀಪದ ಕಂದಾಯ ಇಲಾಖೆ ವ್ಯಾಪ್ತಿಯ 1.20 ಎಕರೆ ಜಾಗವಿದ್ದು, ಅಲ್ಲಿಗೆ ಎಲ್ಲ ಕುಟುಂಬ ಸ್ಥಳಾಂತರ ಮಾಡಬೇಕು ಎಂದು ಸದಸ್ಯ ಆರ್. ತಿಪ್ಪೇಸ್ವಾಮಿ ಒತ್ತಾಯಿಸಿದರು.

ಮೂಲಸೌಕರ್ಯ ಕಲ್ಪಿಸಿ: ಜಗಳೂರಿನ ದೇವೇಗೌಡ ಬಡಾವಣೆ ನಿರ್ಮಾಣ ಅವೈಜ್ಞಾನಿಕವಾಗಿದೆ. ಅಲ್ಲಿ ನೂರಾರು ಮನೆಗಳಿದ್ದರೂ ಸರಿಯಾದಸೌಕರ್ಯಗಳಿಲ್ಲ. ಮಳೆ ಬಂದರೆ ಬಡಾವಣೆ ಜಲಾವೃತಗೊಳ್ಳುತ್ತದೆ. ಇದಕ್ಕೆ ಪಪಂ ಅಧಿಕಾರಿಗಳೇ ನೇರ ಹೊಣೆ. ತಕ್ಷಣವೇ ರಸ್ತೆ, ಚರಂಡಿ ಹೊಸದಾಗಿ ನಿರ್ಮಿಸಲು ಅನುದಾನ ನೀಡಬೇಕು ಎಂದು ಸದಸ್ಯರಾದ ನಿರ್ಮಲಾಕುಮಾರಿ, ಲಲಿತಾ ಆಗ್ರಹಿಸಿದರು.