ಜಗಳೂರು: ತನ್ನನ್ನು ತಾನು ಅರಿತರೆ ಎಲ್ಲ ಕುಲ ಒಂದೇ ಎಂದು ಸಾರಿದವರು ಬಸವಣ್ಣ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ದಾವಣಗೆರೆಯಿಂದ ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತಕ್ಕೆ ಮಂಗಳವಾರ ಆಗಮಿಸಿದ ಬಸವ ಸಂಸ್ಕೃತಿ ರಥವನ್ನು ಸ್ವಾಗತಿಸಿ ಮಾತನಾಡಿದರು.
ರಾಜಕೀಯ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ನೈತಿಕ ಸಾಂಸ್ಕೃತಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಪರಿವರ್ತನೆ ತಂದವರು ಬಸವಣ್ಣ. ಜಾತಿ, ಮತ, ಲಿಂಗ, ಬಡವ ಎನ್ನುವ ಭೇದವಿಲ್ಲದ ಸಮ ಸಮಾಜ ನೆಲೆಗೊಳಿಸಿದರು ಎಂದು ಹೇಳಿದರು..
ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಅಜ್ಜಯ್ಯ ನಾಡಿಗೇರ್ ಮಾತನಾಡಿ, ನಮ್ಮ ದೇಶದ ಸಂವಿಧಾನದ ಆಶಯಗಳೆಲ್ಲ ಬಸವಾದಿ ಶರಣರ ವಚನ ಸಂವಿಧಾನದಲ್ಲಿ ಅಡಕವಾಗಿದೆ. ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದರಿಂದ ಒಂದು ಜಾತಿಗೆ ಸೀಮಿತವಾಗದ ಅವರು ಎಲ್ಲರಿಗೂ ನಾಯಕ ಎಂದರು.
ಬಸವ ಸಂಸ್ಕೃತಿ ಅಭಿಯಾನದ ಸಂಘಟನಾ ಕಾರ್ಯದರ್ಶಿ ಲಿಂಗಾನಂದ್ ಕಮ್ಮತ್ತಹಳ್ಳಿ ಮಾತನಾಡಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮುಖಂಡರು ಬಸವ ರಥ ಸ್ವಾಗತಿಸಿದರು. ನಂತರ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಅಲ್ಲಿಂದ ಆರಂಭಗೊಂಡ ಮೆರವಣಿಗೆ ಹೊಸ ಬಸ್ ನಿಲ್ದಾಣ, ದಾವಣಗೆರೆ ರಸ್ತೆ, ಮಹಾತ್ಮಗಾಂಧಿ ಹಳೆ ವೃತ್ತದವರೆಗೂ ಸಾಗಿತು.