ಜಿಲ್ಲೆ

ಫೀಡರ್ ಚಾನಲ್ ಅಭಿವೃದ್ಧಿಗೆ ಮನವಿ

ಜಗಳೂರು: ಪಟ್ಟಣದ ಕೆರೆಗೆ ನೀರು ಹರಿದು ಬರುವ ಫೀಡರ್ ಚಾನಲ್‌ನಲ್ಲಿ ಹೂಳು ತುಂಬಿ ನೀರು ವ್ಯರ್ಥವಾಗುತ್ತಿದೆ. ಆದ್ದರಿಂದ ಚಾನಲ್ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂದು ಶಾಸಕ ಎಸ್.ವಿ.ರಾಮಚಂದ್ರ ಅವರಿಗೆ ರೈತರು ಮನವಿ ಮಾಡಿದರು.

ಕಾರ್ಯಕ್ರಮವೊಂದಕ್ಕೆ ತೆರಳಿ ಶನಿವಾರ ಉಜ್ಜಯಿನಿ ರಸ್ತೆ ಮಾರ್ಗವಾಗಿ ಕೆರೆ ಬಳಿ ಆಗಮಿಸಿದ ಶಾಸಕರ ಕಾರು ನಿಲ್ಲಿಸಿ, ರೈತರು ತಮ್ಮ ಅಳಲು ತೋಡಿಕೊಂಡರು.

ಮಳೆ ಕೊರತೆಯಿಂದ ಕೆರೆ ತುಂಬುವುದು ಅಪರೂಪವಾಗಿದೆ. ಈ ವರ್ಷ ಸುರಿದ ಮಳೆಯಿಂದ ಸ್ವಲ್ಪ ನೀರು ಬಂದಿದೆ. ಆದರೆ ಫೀಡರ್ ಚಾನಲ್‌ನಲ್ಲಿ ಕಲ್ಲು, ಮಣ್ಣು ಬಿದ್ದು, ಗಿಡ, ಮರಗಳು ಬೆಳೆದು ಸರಾಗವಾಗಿ ನೀರು ಹರಿಯದೇ ಭರಮಸಮುದ್ರದ ಕೆರೆಯತ್ತಾ ಹರಿದು ಹೋಗುತ್ತಿದೆ. ಈ ಕೆರೆಗೆ ಸರಿಯಾಗಿ ನೀರು ಬರುತ್ತಿಲ್ಲ. ಹೂಳು ತೆಗೆದರೆ ಮಾತ್ರ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ರೈತರು ಹೇಳಿದರು.

ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ಕೆರೆಗಳು ರೈತರ ಜೀವನಾಡಿಯಾಗಿದ್ದು, ಅವುಗಳ ಉಳಿವಿಗೆ ಎಲ್ಲರೂ ಕೈಜೋಡಿಸಬೇಕು. ಜಗಳೂರು ಕೆರೆ ಈ ಭಾಗದ ರೈತರಿಗೆ ತುಂಬ ಸಹಕಾರಿಯಾಗಿದೆ. ಫೀಡರ್ ಚಾನಲ್ ಅಭಿವೃದ್ಧಿಪಡಿಸುವ ಬಗ್ಗೆ ಬೇಸಿಗೆಯಲ್ಲಿ ನನ್ನ ಗಮನಕ್ಕೆ ತಂದಿದ್ದರೆ ಅನುಕೂಲವಿರುತ್ತಿತ್ತು. ಆದರೆ ಈಗ ಮಳೆಗಾಲವಾಗಿದ್ದು, ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಎನ್.ಎಸ್.ರಾಜು, ಕೆರೆ ಬಳಕೆದಾರರ ಸಂಘದ ತಿಮ್ಮಾರೆಡ್ಡಿ, ಮಂಜುನಾಥ್, ಸಿ.ಲಕ್ಷ್ಮಣ್, ಹನುಮಂತಪ್ಪ ಇತರರಿದ್ದರು.