ಜಗಳೂರು: ಇಲ್ಲಿನ ಸರ್ಕಾರಿ ಪಿಯು ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಶಾಲಾ ಮಕ್ಕಳಿಗೆ ಗುರುವಾರ ರಕ್ತದ ಗುಂಪು ಉಚಿತ ಪರೀಕ್ಷಾ ಶಿಬಿರ ಆಯೋಜಿಸಲಾಗಿತ್ತು.
ಆರೋಗ್ಯ ಇಲಾಖೆ ಸಿಬ್ಬಂದಿ ಬೆಳಗ್ಗೆಯಿಂದಲೇ 800 ಶಾಲಾ ಮಕ್ಕಳ ರಕ್ತ ಗುಂಪು ಪರೀಕ್ಷಿಸಿದರು. ತಾಲೂಕು ವೈದ್ಯಾಧಿಕಾರಿ ಡಾ.ಜೆ.ಒ.ನಾಗರಾಜ್ ಮಾತನಾಡಿ, ರಕ್ತ ಪರೀಕ್ಷೆ ರೋಗ ಪತ್ತೆ ಮಾಡಲು ಸಹಕಾರಿಯಾಗುತ್ತದೆ ಎಂದರು.
5ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ರಕ್ತ ಪರೀಕ್ಷೆ ನಡೆಸಲಾಗುವುದು. ತಾಲೂಕಿನಲ್ಲಿ 25 ಸಾವಿರ ವಿದ್ಯಾರ್ಥಿಗಳಿದ್ದು, ಅದರಲ್ಲಿ 5 ಸಾವಿರ ಮಕ್ಕಳಿಗೆ ಮಾತ್ರ ಪರೀಕ್ಷೆ ಮಾಡುವಷ್ಟು ಪರಿಕರಗಳು ಮತ್ತು ಗುರಿಯನ್ನು ಸರ್ಕಾರ ನೀಡಿದೆ ಎಂದರು. ಶಿಕ್ಷಕಿ ಶಿವಮ್ಮ, ಆರೋಗ್ಯ ಇಲಾಖೆ ಲ್ಯಾಬ್ ಟೆಕ್ನಿಷಿಯನ್ ಸುನಿಲ್ ಇತರರಿದ್ದರು.