ಜಿಲ್ಲೆ

ಸಮಾನ ವೇತನದ ಬಗ್ಗೆ ಚರ್ಚೆ

Davanagere

ಜಗಳೂರು: ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ಕಾರ್ಯಕರ್ತೆಯರಿಗೆ ಸಮಾನ ವೇತನ ನೀಡುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದು ಶಾಸಕ ಎಸ್.ವಿ.ರಾಮಚಂದ್ರ ಭರವಸೆ ನೀಡಿದರು.

ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕು ಸಾರ್ವಜನಿಕ ಶಿಕ್ಷಣ ಇಲಾಖೆ, ಅಕ್ಷರ ದಾಸೋಹ ಕಾರ್ಯಕ್ರಮದಡಿ ಮಧ್ಯಾಹ್ನ ಬಿಸಿಯೂಟ ತಯಾರಕರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಬಹುತೇಕ ಶಾಲೆಗಳಲ್ಲಿ ಅಡುಗೆ ಅನಿಲಗಳಲ್ಲೇ ಊಟ ತಯಾರಿಸುತ್ತಿರುವುದು ಗಮನಾರ್ಹ. ಆದರೆ ಅನಿಲಸೋರಿಕೆ ಅಥವಾ ಲೋಪಗಳಿಂದ ಸಂಭವಿಸುವ ಅವಘಡಗಳನ್ನು ತಪ್ಪಿಸಲು ತರಬೇತಿ ಕಾರ್ಯಾಗಾರ ಅತ್ಯವಶ್ಯವಾಗಿದೆ. ಇದರ ಪ್ರಯೋಜನ ಪಡೆದು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಜಗಳೂರು ಹಾಗೂ ನೆರೆಹೊರೆಯ ತಾಲೂಕುಗಳ ಮುಗ್ಧ ಮಹಿಳೆಯರು ದೇವದಾಸಿಯಂಥ ಅನಿಷ್ಠ ಪದ್ಧತಿಗಳಿಗೆ ಬಲಿಯಾಗುವುದನ್ನು ತಪ್ಪಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ದೇವರ ಹೆಸರಲ್ಲಿ ಏನೂ ತಿಳಿಯದ ಬಾಲೆಯರ ಬದುಕು ಹಾಳು ಮಾಡಿದರೆ ಸೂಕ್ತ ಕಾನೂನುಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

ಭೋಜನಕೂಟ ಬೇಡ-ವೇತನ ಹೆಚ್ಚಿಸಿ: ವರ್ಷವೆಲ್ಲ ಮಕ್ಕಳಿಗೆ ಬಿಸಿಯೂಟ ತಯಾರಿಸಿ ಉಣಬಡಿಸುವ ಕಾರ್ಯಕರ್ತೆಯರಿಗೆ ಬೇಸಿಗೆಯಲ್ಲಿ ಔತಣಕೂಟ ಮತ್ತು ಉಡುಗೊರೆ ಕೊಡಿ ಎಂದು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಆದರೆ ಅಲ್ಲಿದ್ದ ಕಾರ್ಯಕರ್ತೆಯರು ನಮಗೆ ಯಾವುದೇ ಉಡುಗೊರೆ, ಊಟ ಬೇಡ ಸರ್, ವೇತನ ಹೆಚ್ಚಿಸಿ ನಮ್ಮ ಜೀವನ ನಡೆಸಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.

ಅಗ್ನಿಶಾಮಕ ದಳದ ಠಾಣಾಧಿಕಾರಿ ಹನುಮಂತರಾಯ ಹಾಗೂ ಅವರ ಸಿಬ್ಬಂದಿ ನೇತೃತ್ವದಲ್ಲಿ ಸಿಲಿಂಡರ್ ಬಳಕೆಯ ಬಗ್ಗೆ ಮಾಹಿತಿ ಮತ್ತು ಬೆಂಕಿ ನಂದಿಸುವ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಜಿಪಂ ಸದಸ್ಯ ಎಸ್.ಕೆ.ಮಂಜುನಾಥ್, ತಾಪಂ ಇಒ ಮಲ್ಲಾನಾಯ್ಕ ಬಿಇಒ ಯುವರಾಜ್‌ನಾಯ್ಕ, ಅಕ್ಷರ ದಾಸೋಹ ಯೋಜನಾಧಿಕಾರಿ ಶ್ರೀನಿವಾಸ್, ತಾಲೂಕು ಕಾರ್ಯದರ್ಶಿ ಮಹಮದ್‌ಬಾಷಾ, ಬಿಜೆಪಿ ತಾಲೂಕು ಅಧ್ಯಕ್ಷ ಪಲ್ಲಾಗಟ್ಟೆ ಮಹೇಶ್, ಆಡಳಿತ ಅಧಿಕಾರಿ ರಶ್ಮಿ ಮತ್ತಿತರರಿದ್ದರು.