ಜಿಲ್ಲೆ

ಜಗಜ್ಯೋತಿ ಬಸವೇಶ್ವರ ಆಧ್ಯಾತ್ಮಿಕ ನಾಯಕ

ತಿ.ನರಸೀಪುರ: ಜಗಜ್ಯೋತಿ ಬಸವೇಶ್ವರರು ಜನಸಾಮಾನ್ಯರ ಧಾರ್ಮಿಕ ಆಚರಣೆಗೆ ಧರ್ಮ ಸಂಹಿತೆಯನ್ನು ಕೊಟ್ಟಂತಹ ಆಧ್ಯಾತ್ಮಿಕ ನಾಯಕ ಎಂದು ಹಲವಾರ ಮಠದ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ ಬಣ್ಣಿಸಿದರು.

ತಾಲೂಕಿನ ಮುಡುಕನಪುರ ಗ್ರಾಮದಲ್ಲಿ ಸೋಮವಾರ ಬಸವ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಜಗತ್ತಿನಲ್ಲಿ ಕಟ್ಟಕಡೆಯ ಮನುಷ್ಯನಿಗೆ ಸಿಗದಿರುವ ಪ್ರೀತಿ, ಪ್ರೇಮ, ವಿಶ್ವಾಸವನ್ನು ಇಂದು ಜನಮಾನಕ್ಕೆ ಬಿತ್ತಿದವರು ಬಸವಾದಿ ಪ್ರಮತರು, ಬಸವಣ್ಣ ಎಂದರೆ ಬೇರೇನು ಅಲ್ಲ ಅದು ಪ್ರೇಮ, ವಿಶ್ವಾಸ, ಅಭಿಮಾನ ಅಷ್ಟೇ ಎಂದ ಶ್ರೀಗಳು, ಜಗತ್ತಿನ ಎಲ್ಲ ಜನಗಳಿಗೆ ಸ್ವಾಭಿಮಾನ ಬಿತ್ತುವಲ್ಲಿ ಅವರು ಅಂದೇ ಯಶಸ್ವಿಯಾಗಿದ್ದರು ಎಂದರು.

ಎಂಎಲ್ ಹುಂಡಿ ಅಲ್ಲಮಪ್ರಭು ಶೂನ್ಯ ಪೀಠದ ಗೌರಿಶಂಕರ ಸ್ವಾಮಿ ಮಾತನಾಡಿ, ಬಸವಣ್ಣನವರು ರೈತರ ಪರವಾಗಿ ದನಿ ಎತ್ತಿದವರು, ಅಂದು ಶೂದ್ರರೆಂದು ಕರೆಯುತ್ತಿದ್ದ ರೈತರಿಗೆ ಬಸವಣ್ಣ ಇಷ್ಟಲಿಂಗ ಕೊಟ್ಟು ಸ್ಥಾವರ ಲಿಂಗ ಪೂಜೆ ಬದಲಿಗೆ ಇಷ್ಟಲಿಂಗ ಪೂಜೆ ಮಾಡುವಂತೆ ಹೇಳಿ ಇಡೀ ಜಗತ್ತೇ ಲಿಂಗದ ಮಧ್ಯೆ ಇದೆ ಎಂದು ಹೇಳಿದ್ದರು. ಇಷ್ಟಲಿಂಗದ ಪೂಜೆ ಎಂದರೆ ನಮ್ಮ ಪೂಜೆ ನಾವೇ ಮಾಡಿಕೊಳ್ಳುವುದಾಗಿದೆ. ಬಡವ ಶ್ರೀಮಂತ ಎಂಬ ಭೇದ ಭಾವ ಇಲ್ಲದೆ ಭಗವಂತ ಎಲ್ಲರಿಗೂ ಸಿಗಲಿ ಎಂಬುದು ಬಸವಣ್ಣನವರ ಪರಿಕಲ್ಪನೆಯಾಗಿತ್ತು. ಹಾಗಾಗಿ ಇಷ್ಟಲಿಂಗ ಕೊಟ್ಟರು. ಲಿಂಗಾಯತ ಧರ್ಮ ಶೋಷಿತರಿಂದ ಕೂಡಿದೆ, ಅವತ್ತೇನು ಮತೀಯವಾದಿಗಳು ಇದ್ದರೋ ಅವರು ನಮ್ಮನ್ನೆಲ್ಲಾ ಶೂದ್ರರೆಂದು ಕರೆಯುತ್ತಿದ್ದರೋ ಅವರನ್ನೆಲ್ಲಾ ಮೆಲ್ಪಂಕ್ತಿಗೇರಿಸಿ ಬಸವಣ್ಣನವರು ಲಿಂಗಾಯತರನ್ನಾಗಿ ಮಾಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಅರೆ ಬೊಮ್ಮನಹಳ್ಳಿ ಪಾರಮಾರ್ಥ ಮಠದ ಮಲ್ಲಿಕಾರ್ಜುನ ಸ್ವಾಮಿ, ಮಂಜು ಬುದ್ಧಿ, ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಸಿ.ಎಂ.ಪ್ರಕಾಶ್, ಬಸವ ಬಳಗದ ಅಧ್ಯಕ್ಷ ಪರಮೇಶ್ ಪಟೇಲ್, ತಾ.ಪಂ ಮಾಜಿ ಅಧ್ಯಕ್ಷ ಕುಮಾರಸ್ವಾಮಿ, ದೊಡ್ಡನಹುಂಡಿ ನಂಜುಂಡಸ್ವಾಮಿ, ಬಿ.ಎಸ್.ಸುಗಂಧರಾಜು, ಕಾರ್ ಮಲ್ಲಪ್ಪ, ಚಿದರವಳ್ಳಿ ನವೀನ್, ಗೌಡರ ಗುರುಪಾದಸ್ವಾಮಿ, ಗೌಡರ ಅವಿನಾಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಶೀಲಾ ನಾಗೇಶ್, ಮಾದಪ್ಪನ ಸತೀಶ್, ಬಿ.ಕೆ.ಮಹದೇವಸ್ವಾಮಿ, ಗ್ರಾ.ಪಂ. ಮಾಜಿ ಸದಸ್ಯ ಬಸವರಾಜು, ಎಂ.ಎಸ್.ಮಹದೇವಸ್ವಾಮಿ, ಕಜ್ಜಿಹುಂಡಿ ಗುರುಮಲ್ಲಪ್ಪ, ಮಲ್ಲಪ್ಪನಸ್ವಾಮಿ, ನಾಗಭೂಷಣ್, ಹರೀಶ್ ಕುಮಾರ್, ವಿಶ್ವನಾಥ್, ಜಿ.ಸತ್ಯಮೂರ್ತಿ, ದೊಳ್ಳಪ್ಪನ ಚಿಕ್ಕೂಸಪ್ಪ, ಚಿಕ್ಕಪ್ಪಯ್ಯನ ಬಸವಣ್ಣ, ಡೈರಿ ಚಂದ್ರಸ್ವಾಮಿ, ನಂದೀಶ್, ನಾಗೇಶ್, ಎಂ.ಸಿ.ಮಹದೇವಸ್ವಾಮಿ, ಶಂಕರ್ ಮುಡುಕನಪುರ ಬಸವ ಬಳಗದ ಯುವ ಮುಖಂಡರುಗಳು ಗ್ರಾಮಸ್ಥರು ಇದ್ದರು.