ಜಿಲ್ಲೆ

ಕ್ಷಮೆ ಕೇಳಿದ ಜಗದೀಶ್ ಅಧಿಕಾರಿ

Dakshina Kannada

ಮೂಡುಬಿದಿರೆ: ವಾಲ್ಪಾಡಿ ಧಾರ್ಮಿಕ ಸಭೆಯಲ್ಲಿ ನಾನು ಪ್ರಮಾದವಶಾತ್ ಹೇಳಿಕೆ ನೀಡಿರುವುದು ಹಾಗೂ ನಂತರದ ಬೆಳವಣಿಗೆಗಳಿಂದ ಬಿಲ್ಲವ ಸಮುದಾಯವರ ಸಹಿತ ಯಾರಿಗಾದರೂ ನೋವಾಗಿದಲ್ಲಿ ಕ್ಷಮೆ ಕೇಳುತ್ತೇನೆ ಎಂದು ಬಿಜೆಪಿ ಮುಖಂಡ ಕೆ.ಪಿ.ಜಗದೀಶ್ ಅಧಿಕಾರಿ ತಿಳಿಸಿದರು.

ಕೆಲವು ಟ್ರೋಲ್ ಪೇಜ್‌ಗಳು ನನ್ನ ಬಗ್ಗೆ ಕೀಳಾಗಿ ಪ್ರಚಾರ ಮಾಡುತ್ತಿದ್ದು, ಅಂತವುಗಳ ಬಗ್ಗೆ ಸೈಬರ್ ಕ್ರೈಂಗೆ ದೂರು ನೀಡುತ್ತೇನೆ. ಬಿಲ್ಲವ ಸಂಘ ನೀಡಿರುವ ದೂರಿನಂತೆ ಪೊಲೀಸ್ ತನಿಖೆಗೆ ಸಿದ್ಧ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.

ನನ್ನ ನೇತೃತ್ವದಲ್ಲಿ ನಡೆಯುವ ಕೆಲ್ಲಪುತ್ತಿಗೆ ಭೂತರಾಜ ಗುಡ್ಡೆ ನೇಮೋತ್ಸವದಲ್ಲಿ ಕೋಟಿ ಚೆನ್ನಯರನ್ನೂ ಆರಾಧಿಸುತ್ತ ಬಂದಿದ್ದೇನೆ. ಕೋಟಿ ಚೆನ್ನಯರ ಬಗ್ಗೆ ನನ್ನ ಹೇಳಿಕೆಗೆ ಪ್ರಾಯಶ್ಚಿತವಾಗಿ ಸಂಕ್ರಾತಿಯಂದು ತಪ್ಪು ಕಾಣಿಕೆ ಹಾಕುತ್ತೇನೆ. ನನ್ನ ಗುರುಗಳಾದ ಜನಾರ್ದನ ಪೂಜಾರಿ ಅವರ ಮನೆಗೆ ಶುಕ್ರವಾರ ಹೋಗಿ ಮಾತನಾಡಿದ್ದೇನೆ ಎಂದರು. ನನ್ನ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರವಾದಲ್ಲಿ ನಾನು ರಾಜಕೀಯ ನಿವೃತ್ತಿಗೂ ಸಿದ್ಧ. ಮುಂದುವರಿದರೆ ನಮ್ಮ ಧರ್ಮದ ಸಲ್ಲೇಖನ ವ್ರತದ ಮುಖೇನ ದೇಹ ತ್ಯಾಗಕ್ಕೂ ಸಿದ್ಧನಿದ್ದೇನೆ ಎಂದು ತಿಳಿಸಿದರು.

ಕಾಂಗ್ರೆಸ್ ಖಂಡನೆ: ಬಿಲ್ಲವ ಸಮುದಾಯ, ಕೋಟಿ ಚೆನ್ನಯರ ನಿಂದನೆ, ಜನಾರ್ದನ ಪೂಜಾರಿಯವರ ಅವಹೇಳನ ಮಾಡಿರುವ ಜಗದೀಶ್ ಅಧಿಕಾರಿ ಜಾತಿಗಳ ಮಧ್ಯೆ ವೈಷಮ್ಯ ಸೃಷ್ಟಿಸುವ ಕೆಲಸ ಮಾಡಿದ್ದು, ಕಾಂಗ್ರೆಸ್ ಖಂಡಿಸುತ್ತದೆ. 7 ದಿನದೊಳಗೆ ಕ್ಷಮೆ ಯಾಚಿಸದಿದ್ದಲ್ಲಿ ಅವರ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದಾರೆ. ವಿಷಾದ ವ್ಯಕ್ತಪಡಿಸಿದರೆ ಸಾಲದು, ಕ್ಷಮೆ ಕೇಳಬೇಕು ಎಂದು ಮಾಜಿ ಮೇಯರ್ ಕವಿತಾ ಸನಿಲ್ ಒತ್ತಾಯಿಸಿದರು.

ಮೂಲ್ಕಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ಗೆಜ್ಜೆಗಿರಿ ಕ್ಷೇತ್ರಕ್ಕೆ ಹೋಗಿ ಜಗದೀಶ್ ಅಧಿಕಾರಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಬಿಲ್ಲವ ಮತ್ತು ಬಂಟ ಸಮುದಾಯದ ನಡುವೆ ವಿಷ ಬೀಜ ಬಿತ್ತಿದ ಬಿಜೆಪಿಯವರ ಈ ಮೂಲಕ ಬಯಲಾಗಿದ್ದು, ಕೋಟಿ ಚೆನ್ನಯರೇ ಜಿಲ್ಲೆಯ ಜನರ ಕಣ್ಣು ತೆರೆಸಿದ್ದಾರೆ ಎಂದರು.