ಜಿಲ್ಲೆ

ಶೃಂಗೇರಿಯ ಶ್ರೀ ವಿದ್ಯಾಶಂಕರೇಶ್ವರ ತೆಪ್ಪೋತ್ಸವ

ಶೃಂಗೇರಿ: ಶ್ರೀಮಠದಲ್ಲಿ ಸೋಮವಾರ ತುಂಗಾ ಪುಷ್ಕರದ ಅಂಗವಾಗಿ ಬೆಳಗ್ಗೆ 8 ಗಂಟೆಗೆ ತುಂಗಾ ನದಿಗೆ ಕಲ್ಪೋಕ್ತ ಪೂಜೆ ನಡೆಸಿ ತುಂಗಾಕಲಶ ಜಲವನ್ನು ಉತ್ಸವದಲ್ಲಿ ತರಲಾಯಿತು. ನಂತರ ಶ್ರೀ ಶಾರದಾಂಬ, ಶ್ರೀ ಶಂಕರ ಭಗವತ್ಪಾದರು ಹಾಗೂ ಶ್ರೀ ವಿದ್ಯಾಶಂಕರ ದೇವರ ಸನ್ನಿಧಿಯಲ್ಲಿ ಅಭಿಷೇಕ ನೆರವೇರಿಸಲಾಯಿತು.

ವಿದ್ಯಾಶಂಕರ ದೇವಾಲಯದಲ್ಲಿ ಮಹಾರುದ್ರ ಪುರಶ್ಚರಣೆ ಧಾರ್ವಿುಕ ವಿಧಿ ವಿಧಾನಗಳ ನಂತರ ಜಗದ್ಗುರುಗಳು ವಿಶೇಷ ಪೂಜೆ ನೆರವೇರಿಸಿದರು. ರಾತ್ರಿ ಶ್ರೀಮಠದ ಯತಿವರಣ್ಯೇಯರು ತುಂಗಾ ದಡದಲ್ಲಿರುವ ತುಂಗೆ, ಶ್ರೀ ವರಾಹಮೂರ್ತಿ, ಶ್ರೀ ಶಾರದಾ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿದರು.

ಸಾಲಂಕೃತಗೊಂಡ ದೋಣಿಯಲ್ಲಿ ಶ್ರೀ ವಿದ್ಯಾಶಂಕರೇಶ್ವರ ತೆಪ್ಪೋತ್ಸವಕ್ಕೆ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಪೂಜೆ ಸಲ್ಲಿಸಿದರು. ಪುರೋಹಿತರು ತುಂಗಾರತಿ ಬೆಳಗಿದರು. ಭಕ್ತರು ತುಂಗೆಗೆ ದೀಪಗಳ ಬಾಗಿನ ಸಮರ್ಪಿಸಿದರು. ಮಂಗಳವಾರ ಉಮಾಮಹೇಶ್ವರ ಸ್ವಾಮಿ ತೆಪ್ಪೋತ್ಸವ ಜರುಗಲಿದೆ.