ಜಿಲ್ಲೆ

ಶಾಸಕ ಬಸನಗೌಡ ಪಾಟೀಲ ಯತ್ನಾಳರ ಉಚ್ಚಾಟನೆಗೆ ಖಂಡನೆ, ಬಿಜೆಪಿಗೆ ಏ.10ರ ಗಡುವು ನೀಡಿದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ

ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿರುವುದನ್ನು ಪಂಚಮಸಾಲಿ ಸಮಾಜ ಸಹಿಸಲ್ಲ. ಏಪ್ರೀಲ್ 10ರೊಳಗಾಗಿ ಉಚ್ಚಾಟನೆ ಆದೇಶ ಹಿಂಪಡೆಯದಿದ್ದರೆ ಜನಾಂದೋಲನ ನಡೆಸುವುದಾಗಿ ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದರು.

ನಮ್ಮ ಸಮಾಜದ ಶಾಸಕರೊಬ್ಬರಿಗೆ ಅನ್ಯಾಯವಾಗಿದೆ, ಅದರ ವಿರುದ್ಧ ನಾನು ಧ್ವನಿ ಎತ್ತಿದ್ದೇನೆ. ಆದರೆ ವಿನಾಕಾರಣ ಕೆಲವರು ನಮ್ಮ ಸಮಾಜದ ವಿಷಯದಲ್ಲಿ ಮೂಗು ತೂರಿಸುತ್ತಿದ್ದಾರೆ. ನಮ್ಮ ಸಮಾಜದ ಒಗ್ಗಟ್ಟು, ಪ್ರಗತಿ ಸಹಿಸಿಕೊಳ್ಳದೇ ಹೊಟ್ಟೆಕಿಚ್ಚಿನಿಂದ ಕೆಲವರು ಹೇಳಿಕೆ ನೀಡುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲಿ ಅವರು ತಿಳಿಸಿದರು.

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅನ್ಯಾಯವಾದರೆ ನಾನು ಆತನ ಪರವಾಗಿ ನಿಲ್ಲುವೆ. ಎಲ್ಲ ಸಮಾಜದ ಶ್ರೀಗಳು ಸಹ ತಮ್ಮ ಸಮಾಜಕ್ಕೆ ಅನ್ಯಾಯವಾದಾಗ ಪ್ರತಿಭಟನೆ ಮಾಡಿದ್ದು ಇದೆ. ಅದರಂತೆ ಪಂಚಮಸಾಲಿ ಹೋರಾಟ, ಉತ್ತರ ಕರ್ನಾಟಕ ಪ್ರಗತಿ ಕಳಕಳಿ ಹೊಂದಿರುವ ಜನಪರ ನಾಯಕ ಯತ್ನಾಳ ಅವರ ಬೆನ್ನಿಗೆ ನಿಂತಿದ್ದೇನೆ, ಉಚ್ಛಾಟನೆ ಮಾಡಿರುವುದನ್ನು ಖಂಡಿಸಿದ್ದೇನೆ ಎಂದರು.

ಕಾರಣವಿಲ್ಲದೇ ಒಬ್ಬ ಪ್ರಭಾವಿ ನಾಯಕನನ್ನು ಉಚ್ಛಾಟನೆ ಮಾಡಿರುವುದು ಸಮಸ್ತ ಪಂಚಮಸಾಲಿ ಸಮಾಜದ ಜನರ ಭಾವನೆಗಳಿಗೆ ನೋವು ತರಿಸಿದೆ. ಪಂಚಮಸಾಲಿ ಸಮಾಜ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ ಎಂದರು.

ಯತ್ನಾಳ ಅವರ ಉಚ್ಚಾಟನೆ ವಿರುದ್ಧ ನಡೆಯುವ ಹೋರಾಟ ಬಿಜೆಪಿ ವಿರುದ್ಧದ ಹೋರಾಟವಲ್ಲ. ಬಿಜೆಪಿ ಪಕ್ಷದ ವಿರುದ್ಧ ನಾವು ಹೋರಾಟ ಮಾಡುತ್ತಿಲ್ಲ, ಯತ್ನಾಳರ ಉಚ್ಚಾಟನೆಗೆ ಕಾರಣರಾದ ವ್ಯಕ್ತಿಯ ವಿರುದ್ಧ ನಾವು ಹೋರಾಟಕ್ಕೆ ಅಣಿಯಾಗಿದ್ದೇವೆ ಎಂದು ಶ್ರೀಗಳು ಸ್ಪಷ್ಟಪಡಿಸಿದರು.