ಜಿಲ್ಲೆ

ಜಾಕ್‌ವೆಲ್ ಕೆಲಸ ವೇಗವಾಗಿ ನಡೆಯಲಿ

ರಾಘವೇಂದ್ರಗೌಡ ಭೀ ಪಾಟೀಲ್

ಅಥಣಿ: ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ 20 ತಿಂಗಳಲ್ಲಿ ಪೂರ್ಣವಾಗಲಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದ ನೀರಾವರಿ ಇಲಾಖೆ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸರ್ಕಾರದಲ್ಲಿ ಹಣಕಾಸಿನ ಕೊರತೆ ಇಲ್ಲ. ನಬಾರ್ಡ್ ಹಾಗೂ ಸರ್ಕಾರ 1,480 ಕೋಟಿ ರೂ. ವೆಚ್ಚದಲ್ಲಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯನ್ನು ಡಿ.2025ರ ಒಳಗಾಗಿ ಪ್ರಾಯೋಗಿಕವಾಗಿ ನೀರು ಹರಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ವಿದ್ಯುತ್ ಪವರ್ ಹೌಸ್ ನಿರ್ಮಾಣ, ಝಂಜುರವಾಡ ಗ್ರಾಮ ಬಳಿ ಜಾಕ್‌ವೆಲ್ ನಿರ್ಮಾಣ ಕಾರ್ಯ ತೀವ್ರಗತಿಯಲ್ಲಿ ಮಾಡುವಂತೆ ಸೂಚಿಸಲಾಗಿದೆ. ಅಂತರ್ಜಲಮಟ್ಟ ಹೆಚ್ಚಿಸಲು ಮಹತ್ವದ 13 ಕೆರೆಗಳನ್ನು ತುಂಬುವ ಕಾರ್ಯ ಮಾಡಲಾಗುವುದು. ಬಸವೇಶ್ವರ ಏತ ನೀರಾವರಿ ಯೋಜನೆಗೆ ಎದುರಾಗಿರುವ ತಾಂತ್ರಿಕ ಸಮಸ್ಯೆಯನ್ನು ಸರ್ಕಾರದ ಮಟ್ಟದಲ್ಲಿ ಶಾಸಕ ರಾಜು ಕಾಗೆ ಅವರೊಂದಿಗೆ ಚರ್ಚಿಸಿ ಪೂರ್ಣಗೊಳಿಸುವ ಕಾರ್ಯ ಮಾಡಲಾಗುವುದು ಎಂದರು.

ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳಾದ ಎನ್.ಸಿ.ನಾಗರಾಜ, ಪ್ರವೀಣ ಹುಣಶಿಕಟ್ಟಿ, ಭರತೇಶ ಮಹೇಶವಾಡಗಿ, ದೀಪಕ ಕಾಂಬಳೆ, ಗುತ್ತಿಗೆದಾರ ಸುರೇಶ ಫನಿಕರ, ಅವಿನಾಶ ತ್ರಿಪಾಟೀಲ, ರಾಜೇಶ ಹುಂಡೆ ಇತರರು ಇದ್ದರು.