ಜಿಲ್ಲೆ

ಜಾಕ್‌ವೆಲ್ ಕಾಮಗಾರಿ ಶೇ.90 ಮುಕ್ತಾಯ

ಪ್ರಶಾಂತ ಹೂಗಾರ

ರಾಯಬಾಗ: 39 ಕೆರೆ ತುಂಬಿಸುವ ಯೋಜನೆ ಕಾಮಗಾರಿ ಈಗಾಗಲೇ ಶೇ.90 ಮುಗಿದಿದ್ದು, ಉಳಿದದ್ದನ್ನು ಶೀಘ್ರ ಮುಗಿಸಬೇಕು. ವಿದ್ಯುತ್ ಸಂಪರ್ಕ ನೀಡುವುದು ಬಾಕಿ ಉಳಿದಿದ್ದು, 33 ಕೆವಿ ವಿದ್ಯುತ್ ಸಾಮರ್ಥ್ಯದ ಸಂಪರ್ಕ ನೀಡುವಂತೆ ಶಾಸಕ ಡಿ.ಎಂ. ಐಹೊಳೆ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಬಾವನಸೌಂದತ್ತಿ ಗ್ರಾಮದ ಕಷ್ಣಾ ನದಿ ದಡದಲ್ಲಿ ನಿರ್ಮಿಸುತ್ತಿರುವ ಕೆರೆ ತುಂಬುವ ಯೋಜನೆ ಕಾಮಗಾರಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಜಾಕ್‌ವೆಲ್ ವೀಕ್ಷಿಸಿ ಮಾತನಾಡಿದರು.

100 ಕೋಟಿ ರೂ. ವೆಚ್ಚದ ಈ ಕೆರೆ ತುಂಬಿಸುವ ಯೋಜನೆಯಿಂದ ತಾಲೂಕಿನ ದಕ್ಷಿಣ ಭಾಗದ ಮಳೆಯಾಶ್ರಿತ ಪ್ರದೇಶಗಳ ಜನ-ಜಾನುವಾರು ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸಲು ಅನುಕೂಲವಾಗಲಿದೆ. ರೈತರಿಗೆ ಅನುಕೂಲವಾಗುವಂತೆ ಕಾಮಗಾರಿ ಮುಗಿದ ತಕ್ಷಣ ನೀರೆತ್ತಿ ಕೆರೆಗಳಿಗೆ ಹರಿಸಲಾಗುವುದು ಎಂದು ತಿಳಿಸಿದರು.

ನೀರಾವರಿ ಅಧಿಕಾರಿಗಳಾದ ಇಇ ಎಸ್.ಎಸ್.ಕರಿಗಾರ, ಎಇಇ ಕಲ್ಮೇಶ ಕಮಲಾಕರ, ರಾಮಚಂದ್ರ ಕಾಟೆ, ಅನಿಲ ಹಂಜೆ, ಮಹಾವೀರ ಪಾಟೀಲ, ದಶರಥ ಕಾಟೆ, ಅಜಿತ ಖೆಮಲಾಪುರೆ, ಸತ್ಯಪ್ಪ ಬಿಷ್ಠೆ, ರಮಜಾನ್ ಮಕಾನದಾರ್, ಶ್ರೀಕಾಂತ ಮಂಗಸೂಳೆ, ಜಿನ್ನಪ್ಪ ಚಂಪು, ಅರುಣ ಶಿಂಧೆ, ಶ್ಯಾಮ ಕಾಂಬಳೆ, ದೇವಪ್ಪ ಗಾಂಜೆ ಇತರರಿದ್ದರು.