ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿಯೇ ಪ್ರಸಿದ್ಧಿ ಪಡೆದಿರುವ ತೂಬಗೆರೆ ಹಲಸಿಗೆ ಈ ಬಾರಿ ಹೆಚ್ಚು ಬೇಡಿಕೆ ಸೃಷ್ಟಿಯಾಗಿದ್ದು, ದೊಡ್ಡಬಳ್ಳಾಪುರ ನಗರದ ಎಪಿಎಂಸಿ ಮುಂಭಾಗದ ರಸ್ತೆಯಲ್ಲಿ ಹಲಸಿನ ಹಣ್ಣಿನ ಸಣ್ಣ ಮಾರುಕಟ್ಟೆಯೇ ಸೃಷ್ಟಿಯಾಗಿದೆ.
ಚಿಕ್ಕಬಳ್ಳಾಪುರ-ಬೆಂಗಳೂರು ಹೆದ್ದಾರಿಯುದ್ದಕ್ಕೂ ಹಲಸಿನ ಹಣ್ಣಿನ ವ್ಯಾಪಾರ ಜೋರಾಗಿದ್ದು ತೂಬಗೆರೆ ಹಲಸಿನ ರುಚಿ ಸವಿಯಲು ಗ್ರಾಹಕರು ಮುಗಿಬಿದ್ದಿದ್ದಾರೆ. ಈ ಬಾರಿ ದೊಡ್ಡಬಳ್ಳಾಪುರ ಭಾಗದಲ್ಲಿ ಹಲಸಿನ ಉತ್ತಮ ಇಳುವರಿಯಿಂದಾಗಿ ಬೆಳೆಗಾರರು ಖುಷಿಯಾಗಿದ್ದಾರೆ. ವಿಶೇಷವೆಂದರೆ ಮಧ್ಯವರ್ತಿಗಳ ಬದಲಿಗೆ ನೇರವಾಗಿ ಬೆಳೆಗಾರರು ಹಲಸಿನ ಹಣ್ಣಿನ ಮಾರಾಟಕ್ಕೆ ಮುಂದಾಗಿದ್ದಾರೆ. ತಾಲೂಕಿನ ಹಲವು ರೈತರು ಸಲನ್ನು ರಸ್ತೆ ಬದಿಯಲ್ಲಿ ರಾಶಿ ಹಾಕಿಕೊಂಡು ಮಾರಾಟ ಮಾಡತೊಡಗಿದ್ದಾರೆ. ಇದರಿಂದ ಪ್ರತೀ ವರ್ಷ ಮಧ್ಯವರ್ತಿಗಳ ಪಾಲಾಗುತ್ತಿದ್ದ ಲಾಭಾಂಶ ನೇರವಾಗಿ ಬೆಳೆಗಾರರಿಗೆ ದಕ್ಕುವಂತಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಹಸಿದು ಹಲಸು ತಿನ್ನು, ಉಂಡು ಮಾವು ತಿನ್ನು ಎನ್ನುವ ನಾಣ್ನುಡಿ ಬಯಲು ಸೀಮೆಯ ಜನನಿತ ಮಾತು, ಬೇಸಿಗೆ ಪ್ರಾರಂಭದೊಂದಿಗೆ ಹಲಸಿನ ಘಮಲು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಹರಡಲು ಪ್ರಾರಂಭಿಸುತ್ತದೆ, ಹಾಗೆಯೇ ಹಲಸಿನ ಮಾರಾಟ ಸಹ ಭರ್ಜರಿಯಾಗಿ ನಡೆಯುತ್ತದೆ. ವಿಶೇಷ ಬಣ್ಣ, ವಾಸನೆ ಹಾಗೂ ರುಚಿಗೆ ಪ್ರಸಿದ್ಧಿ ಪಡೆದಿರುವ ತೂಬಗೆರೆ ಹಲಸಿನ ಘಮ ಗ್ರಾಹಕರನ್ನು ಆಕರ್ಷಿಸುತ್ತಿದೆ.
ಬೇರೆ ಜಿಲ್ಲೆಗಳಿಗೂ ರಪ್ತು: ದೊಡ್ಡಬಳ್ಳಾಪುರ ತಾಲೂಕಿನ ಹಲಸಿನ ರುಚಿ ಮತ್ತು ಅದರ ಬಣ್ಣದ ಕಾರಣದಿಂದ ಎಲ್ಲೆಡೆ ಬೇಡಿಕೆ ಹೆಚ್ಚಿದೆ ಜಿಲ್ಲೆ ಅಲ್ಲದೆ ಮಂಗಳೂರು, ಚಿಕ್ಕಮಗಳೂರು, ಕುಂದಾಪುರ, ಉಡುಪಿ, ಮತ್ತು ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ ಭಾಗದಲ್ಲಿ ಬೇಡಿಕೆ ಇದೆ, ಹಾಗೆಯೇ ನೆರೆಯ ಆಂಧ್ರ,ಕೇರಳ ಹಾಗೂ ತಮಿಳುನಾಡಿನ ಹೊಸೂರು ಭಾಗಗಳಿಗೆ ಇಲ್ಲಿನ ಹಲಸು ರಪ್ತಾಗುತ್ತಿದ್ದು ಎಲ್ಲಡೆ ಡಿಮಾಂಡ್ ಕಂಡುಬರುತ್ತಿದೆ.
ಸಲಿನ ಗುತ್ತಿಗೆ: ಕೆಲವು ಭಾಗಗಳಲ್ಲಿ ಹಲಸಿನ ಮರಗಳ ಗುತ್ತಿಗೆ ಪಡೆಯಲಾಗುತ್ತದೆ, ಫೆಬ್ರವರಿ ತಿಂಗಳಿನಿಂದಲೇ ಹಲಸಿನ ಹಣ್ಣಿನ ವ್ಯಾಪಾರ ಪ್ರಾರಂಭವಾಗುತ್ತದೆ, ಹಳ್ಳಿಗಳಿಗೆ ಭೇಟಿ ನೀಡಿ ಮರಗಳಲ್ಲಿನ ಪಿಂದಿಗಳನ್ನು ನೋಡಿ ವ್ಯಾಪಾರ ಮಾಡಲಾಗುತ್ತದೆ, ಮೊದಲೇ ಇಂತಿಷ್ಟು ಹಣ ಸಂದಾಯ ಮಾಡುವುದರಿಂದ ಇದರ ಲಾಭ ನಷ್ಟ ಎಲ್ಲವೂ ಗುತ್ತಿಗೆ ಪಡೆದವರಿಗೆ ಸೇರುತ್ತದೆ.
ಗಾತ್ರದ ಮೇಲೆ ದರ ನಿಗಧಿ:
ಮರಗಳಿಂದ ಹಣ್ಣನ್ನು ಇಳಿಸುವುದು ಸುಲಭದ ಕೆಲಸವಲ್ಲ, ಹಗ್ಗ ಮತ್ತು ಬುಟ್ಟಿಯ ಸಹಾಯದಿಂದ ಹಣ್ಣುಗಳಿಗೆ ಯಾವುದೇ ಹಾನಿಯಾಗದಂತೆ ಎಚ್ಚರವಹಿಸಬೇಕು, ಮರ ಹತ್ತಿ ಹಣ್ಣು ಕ್ಯೂಯುವ ಕೂಲಿ ಕಾರ್ಮಿಕರು ಎಚ್ಚರವಹಿಸಬೇಕು, ಹಣ್ಣಿನ ಗಾತ್ರದ ಮೇಲೆ ಬೆಲೆ ನಿಗಧಿಪಡಿಸಲಾಗುತ್ತದೆ. ಈ ಬಾರಿ ಉತ್ತಮ ಗಾತ್ರದ ಹಣ್ಣುಗಳು ಮಾರುಕಟ್ಟೆಗೆ ಬಂದಿದ್ದು ವ್ಯಾಪಾರಿಗಳು ಹಾಗೂ ಗ್ರಾಹಕರಿಗೂ ಖುಷಿ ತಂದಿದೆ.