ಚೆಲುವೆಯರಂತೆ ಕೆಂಪು ಸೊಳೆಗಳ ಹಲಸು ಯಾವಾಗಲೂ ಗುಂಪಿನಲ್ಲಿ ಆಕರ್ಷಣೆಯ ಕೇಂದ್ರ ಆಗಿರುತ್ತದೆ !
ಯಾವುದೇ ಹಲಸು ಮೇಳಗಳಲ್ಲಿ ಪ್ರದರ್ಶನದಲ್ಲಿಡುವ ಕೆಂಪು ಸೊಳೆಗಳ ಚಂದ್ರ ಹಲಸು ಹಣ್ಣುಗಳು ಸಾಮಾನ್ಯವಾಗಿ ಮೊದಲ ದಿನವೇ ಖಾಲಿಯಾಗಿ ಬಿಡುತ್ತವೆ. ಈ ಕೆಂಪು ಸುಂದರಿಯ ಆಕರ್ಷಣೆಗೆ ಬಿದ್ದು, ಈಕೆಯನ್ನು ಕರಾವಳಿಗೆ ಕರೆತರಬೇಕು ಎಂದು ಹೊರಟವರ ಪ್ರಯತ್ನ ಇಲ್ಲಿಯ ತನಕ ಹೆಚ್ಚು ಫಲ ನೀಡಿಲ್ಲ. ಕಡಿಮೆ ಮಳೆ ಬೀಳುವ ಬಯಲು ಸೀಮೆಯಲ್ಲಿ ಬೆಳೆಯುವ ಚಂದ್ರ ಹಲಸು ವರ್ಗಕ್ಕೆ ಸೇರಿದ ಕೆಂಪು ಸೊಳೆಗಳ ಹಲಸಿನ ಗಿಡಗಳು ಅಧಿಕ ಮಳೆ ಬೀಳುವ ಕರಾವಳಿ ಹಾಗೂ ಮಲೆನಾಡುಗಳಲ್ಲಿ ಸರಿಯಾಗಿ ಬೆಳೆಯುವುದಿಲ್ಲ. ಬೆಳೆದರೂ ಒಳ್ಳೆಯ ಫಸಲು ನೀಡುವುದಿಲ್ಲ. ಆದರೂ ಅಧಿಕ ಮಳೆ ಬೀಳುವ ಭಾಗದ ಜನರಿಗೆ ಈ ಕೆಂಪು ಸುಂದರಿಯರ ಮೋಹ ಬಿಡದು.
- ಮೂಲ ಎಲ್ಲಿ ?
ಕರ್ನಾಟಕ ಜಗತ್ತಿನಲ್ಲಿಯೇ ಅತೀ ಹೆಚ್ಚು ಚಂದ್ರ ಹಲಸಿನ ತಳಿ ಸಂಪತ್ತು ಹೊಂದಿದೆ. ಅದರಲ್ಲೂ ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಭಾಗ ದಲ್ಲಿ ಅತ್ಯುತ್ತಮ ಬೆಳೆ ಬರುತ್ತಿದೆ. ಭಾರತೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ (ಐಐಎಚ್‌ಆರ್) ಯಲ್ಲಿ ಡಾ.ದಿನೇಶ್ ಎಂ.ಆರ್. ನಿರ್ದೇಶಕರಾಗಿದ್ದ ಅವಧಿಯಲ್ಲಿ ಸಿದ್ದು ಹಾಗೂ ಶಂಕರ ರೈತ ತಳಿಗಳ ನೋಂದಣಿ ನಡೆಯಿತು. ವಿಜ್ಞಾನಿ ಡಾ.ಕರುಣಾಕರ್ ಕೂಡ ಈ ವಿಷಯದಲ್ಲಿ ಹೆಚ್ಚಿನ ಪರಿಶ್ರಮ ಹಾಕಿದರು. ಬಳಿಕ ಈ ಕೆಂಪು ಸೊಳೆಗಳ ತಳಿಗಳು ದೇಶೀಯ ಮಟ್ಟದಲ್ಲಿ ಜನಪ್ರಿಯವಾಯಿತು.
- ಸ್ಥಳೀಯ ಬೆಳೆ ಪ್ರಯತ್ನ
ಸಿದ್ದು ಹಾಗೂ ಶಂಕರ ಗಿಡಗಳನ್ನು ಕರ್ನಾಟಕ ಕರಾವಳಿಯಲ್ಲಿ ಬೆಳೆಸುವ ಪ್ರಯತ್ನವನ್ನು ಕೆಲವು ಉತ್ಸಾಹಿ ಕೃಷಿಕರು ಮಾಡಿದ್ದರೂ ಹೆಚ್ಚು ಯಶಸ್ಸು ಪಡೆದಿಲ್ಲ. ಆದರೆ ಕರಾವಳಿ ಜಿಲ್ಲೆಗಳಲ್ಲಿ ಬೆಳೆಯುತ್ತಿರುವ ಕೆಲವು ಹಲಸುಗಳ ಸೊಳೆಗಳು ಕೆಂಪು ಇರುವುದನ್ನು ಬೆಳೆಗಾರರು ಗುರುತಿಸಿದ್ದಾರೆ. ಈ ನಿಟ್ಟಿನಲ್ಲಿ ಅಧಿಕ ಮಳೆಬೀಳುವ ಕರಾವಳಿ ಜಿಲ್ಲೆಗಳಲ್ಲಿ ಬೆಳೆಯುವ ಕೆಂಪು ಸೊಳೆಗಳ ಹಲಸಿನ ತಳಿಯ ಶೋಧದ ಅಗತ್ಯ ಕುರಿತು ಕೆಲವು ತಜ್ಞರು ಗಮನ ಸೆಳೆದಿದ್ದಾರೆ.
………..
ಕೆಂಪು ಸೊಳೆಗಳ ಹಲಸು ಬಗ್ಗೆ ಕರಾವಳಿಯ ಜನರಿಗೆ ಆಕರ್ಷಣೆ ಇದೆ. ಹಲಸು ಮೇಳಗಳಲ್ಲಿ ಈ ಹಲಸು ಉತ್ತಮ ದರಕ್ಕೆ ಮಾರಾಟವಾಗುತ್ತಿದೆ. ಕರಾವಳಿಯಲ್ಲಿ ವಿದೇಶಿ ತಳಿ ಡೆಂಗ್ ಸೂರ್ಯ ಉತ್ತಮ ಫಲಿತಾಂಶ ನೀಡಿದೆ. ಇದು ಹೊರತು ಪಡಿಸಿ ಕೂಡ ಕರಾವಳಿಯ ಕೆಲವು ಕಡೆ ಕೃಷಿಕರು ತಮ್ಮ ತೋಟದಲ್ಲಿ ಬೆಳೆದಿರುವ ಹಲಸಿನ ಸೊಳೆಗಳು ಕೆಂಪು ಇರುವ ಬಗ್ಗೆ ಗಮನ ಸೆಳೆದಿದ್ದಾರೆ. ಕರಾವಳಿಯಲ್ಲಿ ಬೆಳೆಯುವ ಕೆಂಪು ಸೊಳೆಗಳ ಹಲಸಿನ ತಳಿಗಳ ಶೋಧ ಹಾಗೂ ಆಯ್ಕೆ ನಡೆಯಬೇಕಾಗಿದೆ.
- ಶ್ರೀ ಪಡ್ರೆ, ಹಲಸಿನ ಅಂತಾರಾಷ್ಟ್ರೀಯ ರಾಯಭಾರಿ
………..
ಉಡುಪಿ ಜಿಲ್ಲೆಯ ಹಿರಿಯಡ್ಕ, ಇಂದ್ರಾಳಿಯಲ್ಲಿ ಕೆಂಪು ಸೊಳೆ ಹಲಸು ಕಂಡುಬಂದಿದೆ. ವಿದೇಶಿ ತಳಿ ಡೆಂಗ್ ಸೂರ್ಯ, ಕೇರಳ ಕೃಷಿ ವಿಶ್ವ ವಿದ್ಯಲಯದದ ಸಿಂಧೂರ ಎಂಬ ಕೆಂಪು ತಳಿ ಕೇರಳದಲ್ಲಿ ಪ್ರಸಿದ್ಧವಾಗಿದೆ. ಉಪ್ಪಿನಂಗಡಿಯ ವ್ಯಕ್ತಿಯೋರ್ವರು ಕುಣಿಗಲ್ ನಲ್ಲಿರುವ ತಮ್ಮ ತೋಟದಲ್ಲಿ ಬೆಳೆಸಿದ ಸಿಂಧೂರ ಹಲಸು ಥೇಟ್ ಜನಪ್ರಿಯ ಕೆಂಪು ಹಲಸು ಸಿದ್ದು ವನ್ನು ಹೋಲುತ್ತಿದೆ.
- ಗುರುರಾಜ ಬಾಳ್ತಿಲ್ಲಾಯ
ಕೃಷಿಕರು
ಶಂಕರ ಹಲಸು
ಬೆಟ್ಟಂಪಾಡಿ ಹಲಸು