ಮಂಗಳೂರು : ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ಸಾವಯವ ಕೃಷಿಕ ಗ್ರಾಹಕ ಬಳಗದ ಸಹಯೋಗದಲ್ಲಿ ಸಾವಯವ ಕೃಷಿಕರೇ ಬೆಳೆಸಿರುವ ವಿಶಿಷ್ಟ ತಳಿಗಳ ಮಾವು -ಹಲಸು ಮೇಳ ಜೂ.21 ಹಾಗೂ 22ರಂದು ಬೆಳಗ್ಗೆ 7ರಿಂದ ಸಾಯಂಕಾಲ 7ರವರೆಗೆ ನಗರದ ಕದ್ರಿ ಕಂಬಳ ಮಲ್ಲಿಕಾ ಬಡಾವಣೆಯಲ್ಲಿರುವ ಮಂಜು ಪ್ರಾಸಾದದ ಆವರಣದಲ್ಲಿ ನಡೆಯಲಿದೆ.
ಸಾವಯವ ಬಳಗದ ರತ್ನಾಕರ ಕುಳಾಯಿ ವರ ಮಾರ್ಗದರ್ಶನದಲ್ಲಿ ನಡೆಯುವ ಈ ಮೇಳದಲ್ಲಿ ಬೆಳೆಗಾರರಿಗೆ ಮತ್ತು ಗ್ರಾಹಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಜೂ.21ರಂದು ಬೆಳಗ್ಗೆ 10ಕ್ಕೆ ಆರೂರು ಲಕ್ಷ್ಮೀ ರಾವ್ ಮೇಳ ಉದ್ಘಾಟಿಸಲಿದ್ದಾರೆ. ಸ್ವದೇಶಿ ಗೋವುಗಳ ಹಾಗೂ ಪ್ರಾದೇಶಿಕ ಸಸ್ಯಗಳ ತಳಿ ಸಂರಕ್ಷಕ ಡಾ. ಮನೋಹರ ಉಪಾಧ್ಯಾಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ಅವರು ಆರೋಗ್ಯ ಮತ್ತು ಆಹಾರ ಪದ್ದತಿ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ
ಎಸ್. ಪ್ರದೀಪ ಕುಮಾರ ಕಲ್ಕೂರ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಮನಗರ, ಮಂಡ್ಯ, ಮೈಸೂರು, ಬೆಳಗಾವಿ ಹಾಗೂ ಸ್ಥಳೀಯ ಕೃಷಿಕರು ಭಾಗವಹಿಸುತ್ತಿದ್ದು, ರುದ್ರಾಕ್ಷ, ಚಂದ್ರಬರ್ಕೆ ಹಲಸು, ಮಾವಿನ ಹಣ್ಣುಗಳಾದ ಮಲ್ಲಿಕಾ, ಮಲ್ಗೊವ, ನೀಲಂ, ಕಾಳಪಾಡಿ, ಬಾದಾಮಿ, ತೋತಾಪುರಿ ಲಭ್ಯವಿರುತ್ತದೆ. ಹಲಸಿನಿಂದ ತಯಾರಿಸಿದ ಖಾದ್ಯಗಳಾದ ಹಲಸಿನ ಕಬಾಬ್, ಹಲಸಿನ ಗಾರಿಗೆ, ಚಿಪ್ಸ್, ಉಂಡ್ಳಕ, ಹಲಸಿನ ಪಾವುಬಾಜಿ, ಕಡುಬು, ಹಲಸಿನ ಕೇಕ್, ಹೋಳಿಗೆ, ಹಪ್ಪಳ, ಉಪ್ಪಿನಕಾಯಿ, ಐಸ್‌ಕ್ರೀಂ, ವಿವಿಧ ಮಾವು ಹಲಸಿನ ಗಿಡಗಳು, ದೇಸಿ ತರಕಾರಿ ಬೀಜಗಳು, ಸಸಿಗಳು, ಕೃಷಿಗೆ ಸಂಬಂಧಿಸಿದ ಉಪಕರಣಗಳು ಹಾಗೂ ಕೃಷಿ ಸಾಹಿತ್ಯ ಕೃತಿಗಳು ಲಭ್ಯವಿದೆ. ಜೂ.22ರಂದು ರಾಧಾಕೃಷ್ಣ ಪುತ್ತೂರು (ಹಲಸಿನ ಉತ್ಪನ್ನಗಳ ಸಾಧಕ), ಮಹೇಶ್ ರಾಮನಗರ (ಸಾವಯವ ಮಾವು ಕೃಷಿಕ), ಸ್ನೇಹಾ ಭಟ್ (ಹೂ ಹಾಗೂ ಜಲಸಸ್ಯಗಳ ಪಾಲನೆ), ರಮೇಶ್ ನೂಜಿಪಾಡಿ (ಸಾವಯವ ಕೃಷಿಕ), ಚರಣ್‌ರಾಜ್ (ಕೃಷಿ ಉತ್ಪನ್ನಗಳ ಮಾರಾಟಗಾರ) ಇವರುಗಳನ್ನು ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.
ಸಂಘಟಕರಾದ ವಿಜಯಲಕ್ಷ್ಮಿ, ಶೆಟ್ಟಿ, ಜನಾರ್ದನ ಹಂದೆ, ಶರತ್ ಕುಮಾರ್ ಉಪಸ್ಥಿತರಿದ್ದರು.