ಜಿಲ್ಲೆ

ಘಮ ಘಮಿಸುತಿದೆ ಬಗೆ ಬಗೆಯ ಹಲಸು, ತಿನಿಸು

ಮಂಗಳೂರು: ಪರಿಸರವಿಡೀ ಹಲಸು ಹಣ್ಣಿನ ಘಮ ಘಮ. ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳಾದ ಹಲ್ವ, ಹಪ್ಪಳ, ಮಾಂಬಳ, ಗಾರಿಗೆ,ಪಾಯಸ, ಚಿಪ್ಸ್, ಸುಕ್ಕೇಳಿ, ಉಪ್ಪಡ್ ಪಚ್ಚಿಲ್…. ಬಾಯಲ್ಲಿ ನೀರೂರಿಸುವ ಬಗೆ ಬಗೆಯ ತಿಂಡಿಗಳು.


ಇದು ನಗರದ ಶರವು ದೇವಳದ ಬಳಿಯ ಬಾಳಂಭಟ್ ಸಭಾಂಗಣದಲ್ಲಿ ಶನಿವಾರ ಸಾವಯವ ಕೃಷಿಕ ಬಳಗದ ವತಿಯಿಂದ ನಡೆದ 6ನೇ ವರ್ಷದ ಹಲಸು ಮೇಳದ ಹೈಲೈಟ್ಸ್. ವೈವಿಧ್ಯಮಯ ತಳಿಯ ಹಲಸು ಹಾಗೂ ಅದರ ನೂರಾರು ಉತ್ಪನ್ನಗಳ ಸಮಗ್ರ ಪ್ರದರ್ಶನ ಹಾಗೂ ಮಾರಾಟ ಕೇಂದ್ರವಾಗಿ ಪರಿವರ್ತನೆಯಾಗಿದೆ. ಭಾನುವಾರ ಸಂಜೆ ಮೇಳ ಕೊನೆಗೊಳ್ಳಲಿದೆ.


ಮೇಳದಲ್ಲಿ 50 ಕ್ಕೂ ಅಧಿಕ ಮಳಿಗೆಗಳಿವೆ. ಹಲಸಿನ ಹಣ್ಣಿನ ಅಂಗಡಿ, ಹಲಸಿನ ಉತ್ಪನ್ನಗಳ ಮಾರಾಟ ಮಳಿಗೆಗಳು, ಸ್ವಸಹಾಯ, ಸ್ತ್ರೀಶಕ್ತಿ ಸಂಘಗಳು ತಯಾರಿಸಿದ ಅಡುಗೆ ಸಾಮಾಗ್ರಿಗಳು, ವಿವಿಧ ತಳಿಯ ಹಲಸಿನ ಹಾಗೂ ಇತರ ಹಣ್ಣಿನ ಗಿಡಗಳ ಮಾರಾಟ, ಕೃಷಿ ಸಂಬಂಧಿತ ಉಪಕರಣಗಳ ಮಾರಾಟ, ಮಾವು ಹಾಗೂ ಇತರ ಜಾತಿಯ ಫಲವಸ್ತುಗಳ ಪ್ರದರ್ಶನ ಮತ್ತು ಮಾರಾಟ ಇಲ್ಲಿದೆ.