ತುಮಕೂರು : ದೇಶದಲ್ಲಿಯೇ ಉತ್ಕೃಷ್ಟ ಹಲಸಿನಹಣ್ಣಿಗೆ ಜಿಲ್ಲೆ ಪ್ರಸಿದ್ಧಿ ಹೊಂದಿದೆ. ಕಳೆದ ಬಾರಿಯಂತೆ ಈ ಬಾರಿಯೂ ಹಲಸಿನ ಹಣ್ಣಿನ ವ್ಯಾಪಾರಕ್ಕೆ ಕರೊನಾ ಗ್ರಹಣ ಹಿಡಿದಿದೆ. ಲಾಕ್‌ಡೌನ್ ಪರಿಣಾಮ ಹೊರರಾಜ್ಯಗಳಿಂದಲೂ ಬೇಡಿಕೆ ಇಲ್ಲವಾಗಿರುವ ಪರಿಣಾಮ ವಹಿವಾಟು ಸ್ತಬ್ಧಗೊಂಡಿದೆ.
ಕೇರಳ, ಆಂಧ್ರಪ್ರದೇಶ, ಪೂನಾ ಜತೆಗೆ ನಮ್ಮ ರಾಜ್ಯದ ಮಂಗಳೂರು, ಉಡುಪಿ, ಕುಂದಾಪುರ ಸೇರಿ ನಾನಾ ಭಾಗಗಳಿಗೆ ನಿತ್ಯ ಹತ್ತಾರು ಲೋಡ್ ಹಲಸಿನ ಕಾಯಿ, ಹಣ್ಣು ರಫ್ತಾಗುತ್ತದೆ. ನವೆಂಬರ್-ಡಿಸೆಂಬರ್‌ನಿಂದಲೇ ಮಾರುಕಟ್ಟೆ ತೆರೆದುಕೊಳ್ಳುತ್ತದೆ. ಆದರೆ, ಈ ಬಾರಿ ಫೆಬ್ರವರಿಯಿಂದ ಹಲಸು ಫಸಲು ಆರಂಭವಾಗಿದ್ದು ಆಗಸ್ಟ್‌ವರೆಗೆ ಹಣ್ಣಿನ ಮಾರುಕಟ್ಟೆ ಇರುತ್ತದೆ.
ಜಿಲ್ಲೆಯಲ್ಲಿ 50-60 ಸಾವಿರ ಹಲಸಿನ ಮರಗಳಿದ್ದು ಪ್ರತಿಮರಕ್ಕೆ ಒಂದು ಟನ್‌ನಂತೆ 50 ರಿಂದ 60 ಸಾವಿರ ಟನ್ ಹಲಸಿನ ಉತ್ಪಾದನೆ ಆಗಲಿದೆ. ಹಪ್ಪಳ, ಚಿಪ್ಸ್, ಜಾಮ್, ಜ್ಯೂಸ್, ಐಸ್‌ಕ್ರೀಂ ಸೇರಿ ವಿವಿಧ ಬಗೆಯ ಉತ್ಪನ್ನಗಳನ್ನು ಹಲಸಿನಿಂದ ತಯಾರಿಸಬಹುದು. ಹಲಸಿನ ಹಣ್ಣು ಸಂಸ್ಕರಿಸಿ ಮೌಲ್ಯವರ್ಧನೆ ಮಾಡುವ ಬಗ್ಗೆ ಜಿಲ್ಲೆಯಲ್ಲಿ ಯಾರೂ ಮುಂದೆ ಬಾರದೇ ಇರುವುದರಿಂದ ಸಾಕಷ್ಟು ನಷ್ಟ ಉಂಟಾಗುತ್ತಿದೆ. ತೋಟಗಾರಿಕೆ ಇಲಾಖೆ ಕೂಡ ಈ ಬಗ್ಗೆ ಗಮನಹರಿಸುತ್ತಿಲ್ಲ.
ಚೇಳೂರು ಮಾರುಕಟ್ಟೆ: ಜಿಲ್ಲೆಯಲ್ಲಿ ಗುಬ್ಬಿ ತಾಲೂಕಿನಲ್ಲಿ ಅತಿಹೆಚ್ಚು ಹಲಸು ಉತ್ಪಾದನೆ ಆಗುತ್ತದೆ. ಅದೇ ರೀತಿ ಕೊರಟಗೆರೆ ತಾಲೂಕಿನ ತೋವಿನಕೆರೆ ಸುತ್ತಮುತ್ತ ಸಹ ಹಲಸು ಹೆಚ್ಚು ಉತ್ಪಾದನೆ ಆಗುತ್ತಿದ್ದು ಹೊರರಾಜ್ಯಗಳಿಂದಲೂ ಬೇಡಿಕೆ ಇದೆ. ಹಾಗಾಗಿ, ಗುಬ್ಬಿ ತಾಲೂಕಿನ ಚೇಳೂರು ಹಲಸಿನ ವಹಿವಾಟಿಗೆ ದೊಡ್ಡ ಮಾರುಕಟ್ಟೆ ಎನಿಸಿದೆ. ಮಧುಗಿರಿ ಮಾರುಕಟ್ಟೆಯಿಂದಲೂ ಕಾಯಿ, ಹಣ್ಣು ಪೂರೈಸಲಾಗುತ್ತದೆ.
ಹಲಸಿನ ಸಮೃದ್ಧ ಬೀಡಾದ ಕೇರಳದಲ್ಲೇ ತುಮಕೂರು ಹಲಸಿಗೆ ಬೇಡಿಕೆ ಇದೆ. ಆಂಧ್ರಪ್ರದೇಶಕ್ಕೂ ಹಲಸಿನ ಹಣ್ಣು ರಫ್ತು ಮಾಡಲಿದ್ದು ಕರೊನಾ ಮಹಾಮಾರಿ ಆರ್ಭಟದಿಂದ ಕೇರಳ, ಪೂನಾದಲ್ಲಿ ಹಲಸಿನ ಕಂಪನಿಗಳು ಬಂದ್ ಆಗಿವೆ. ಅಲ್ಲದೆ, ಜಿಲ್ಲೆಯಲ್ಲಿ ಹಲಸಿನ ಮೌಲ್ಯವರ್ಧನೆಗೆ ಅವಕಾಶ ಇಲ್ಲ. ಹಾಗಾಗಿ, ಮರದಲ್ಲೇ ಹಣ್ಣಾಗಿ ಉದುರುತ್ತಿವೆ.
ಮಂಗಳೂರು, ಬೆಂಗಳೂರಲ್ಲಿ ಬೇಡಿಕೆ ! : ಹಲಸಿನ ಹಣ್ಣು ತಿನ್ನಲಿಕ್ಕೆ ಮಂಗಳೂರು, ಬೆಂಗಳೂರಲ್ಲಿ ಹೆಚ್ಚಿನ ಬೇಡಿಕೆ ಇದೆ. ಹಾಗಾಗಿ, ವಾರಕ್ಕೆ 10 ಟನ್ ಹಣ್ಣನ್ನು ಕಳುಹಿಸಲಾಗುತ್ತಿದ್ದು ಈಗ ಹಣ್ಣಿನ ಮಾರಾಟವಿಲ್ಲದೆ ಬೇಡಿಕೆ ಕುಸಿದಿದೆ. ಮಾಲ್‌ಗಳು, ಅಪಾರ್ಟ್‌ಮೆಂಟ್‌ಗಳು, ಔಟ್‌ಲೆಟ್‌ಗಳಲ್ಲೂ ಹಣ್ಣಿಗೆ ಬೇಡಿಕೆ ಇಲ್ಲವಾಗಿದೆ.
ಚೇಣಿಗೆ ಪಡೆದವರ ಪಾಡು ಕೇಳೋರಿಲ್ಲ : ಹಲಸಿನ ಮರಗಳನ್ನು ಚೇಣಿಗೆ ಪಡೆದವರು ಈಗ ಬೇಡಿಕೆ ಇಲ್ಲದೆ ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ಅಂದಾಜು 50-60 ಸಾವಿರ ಮರಗಳಿದ್ದು ಇದನು ಚೇಣಿಗೆ ಪಡೆದು ಹೊರರಾಜ್ಯ, ಜಿಲ್ಲೆಗಳಿಗೆ ಕಳುಹಿಸುವ ಕೆಲಸದಲ್ಲಿ 3 ಸಾವಿರಕ್ಕು ಹೆಚ್ಚು ಮಂದಿ ತೊಡಗಿದ್ದು ಈ ಬಾರಿ ಇವರ ಹೊಟ್ಟೆಪಾಡಿಗೂ ಕರೊನಾ ಸಂಕಷ್ಟ ತಂದೊಡ್ಡಿದೆ.
ಪ್ರತಿವರ್ಷ 500 ಟನ್ ಹಲಸಿನ ವಹಿವಾಟನ್ನು ನಮ್ಮ ಸಂಸ್ಥೆ ವತಿಯಿಂದ ಮಾಡುತ್ತಿದ್ದೇವೆ. ಮತ್ತೊಮ್ಮೆ ಕರೊನಾ ಅಟ್ಟಹಾಸದಿಂದ ಹಲಸಿನ ಹಣ್ಣು, ಕಾಯಿಗೆ ಬೇಡಿಕೆ ಕುಸಿದಿದೆ. ಹಾಗಾಗಿ, ಈ ಬಾರಿಯೂ ನಷ್ಟ್ಟ ಅನುಭವಿಸುವಂತಾಗಿದೆ. ತೋಟಗಾರಿಕೆ ಇಲಾಖೆ ಹಲಸಿನ ಬೆಳೆಗಾರರ ಸಂಕಷ್ಟಕ್ಕೆ ನೆರವಾಗಬೇಕು. ಹೇಮಂತ್ ಇಕೊ ಫ್ರೆಸ್ಟ್ ಹಲಸು ಸಂಸ್ಥೆ, ಗುಬ್ಬಿ ಚೇಳೂರಿನಲ್ಲಿ ಭಾನುವಾರ ಹಲಸಿನ ವಹಿವಾಟಿಗೆ ವ್ಯವಸ್ಥೆ ಮಾಡಲಾಗಿದೆ. ಜನತಾಕರ್ಫ್ಯೂ ಇದ್ದರೂ ಹಲಸಿನ ಹಣ್ಣು, ಕಾಯಿ ಸಾಗಣೆೆಗೆ ಯಾವುದೇ ತೊಂದರೆ ಇಲ್ಲ. ಸದ್ಯಕ್ಕೆ ಹೊರರಾಜ್ಯಗಳಿಂದ ಹಲಸಿನ ಹಣ್ಣಿಗೆ ಬೇಡಿಕೆ ಇಲ್ಲ. ಬೇಡಿಕೆ ಹೆಚ್ಚಾದಂತೆ ಹಲಸಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಲಾಗುವುದು. ಬಿ.ರಘು ಉಪನಿರ್ದೇಶಕ, ಜಿಲ್ಲಾ ತೋಟಗಾರಿಕೆ ಇಲಾಖೆ