ಮೂಡುಬಿದಿರೆ: ಸಂಘ ಸಂಸ್ಥೆಗಳು ಯುವಶಕ್ತಿಯನ್ನು ಬಳಸಿಕೊಳ್ಳಬೇಕಾದರೆ ಅವರಲ್ಲಿ ಉತ್ತಮ ಆರೋಗ್ಯ, ಶಿಕ್ಷಣ, ಕೌಶಲ, ಜಾಗೃತಿ ಹಾಗೂ ಸೋಲು ಎದುರಿಸುವ ಗಟ್ಟಿತನ ಅಗತ್ಯ. ಆದರೆ ಇಂದಿನ ಯುವಜನತೆಯಲ್ಲಿ ಸೋಲನ್ನು ಒಪ್ಪಿಕೊಳ್ಳುವ ಮನಸ್ಥಿತಿಯಿಲ್ಲ, ಮಕ್ಕಳನ್ನು ಸರಿದಾರಿಗೆ ತರಲು ಜೇಸಿಯಂತಹ ಸಂಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮೂಡುಬಿದಿರೆ ನ್ಯೂ ವೈಬ್ರೆಂಟ್ ವಿದ್ಯಾಸಂಸ್ಥೆ ಟ್ರಸ್ಟಿ, ವೇಣೂರು ಬ್ರೈಟ್ ಹರಿಜೋನ್ ಇಂಟರ್‌ನ್ಯಾಶನಲ್ ಸ್ಕೂಲ್ ಅಧ್ಯಕ್ಷ ಶರತ್ ಗೋರೆ ಹೇಳಿದರು.
ಜೆಸಿಐ ಮೂಡುಬಿದಿರೆ ತ್ರಿಭುವನ್ ಆಶ್ರಯ, ಜೇಸಿರೇಟ್, ಜೂನಿಯರ್ ಜೇಸಿ ಸಹಯೋಗದಲ್ಲಿ ಸೋಮವಾರ ರಾತ್ರಿ ಸಮಾಜ ಮಂದಿರದಲ್ಲಿ ನಡೆದ ಜೇಸಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಜೇಸಿ ಅಧ್ಯಕ್ಷೆ ವರ್ಷಾ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಪೂರ್ವಾಧ್ಯಕ್ಷರಾದ ಮಹೇಂದ್ರವರ್ಮ ಜೈನ್, ಮಹಮ್ಮದ್ ಆರೀಫ್, ಅಬುಲ್ ಅಲಾ ಪುತ್ತಿಗೆ, ಹಿರಿಯ ಸದಸ್ಯ ಅನಂತಕೀರ್ತಿ ಜೈನ್, ಪ್ರದೀಪ್ ಕುಮಾರ್, ಕಾರ್ಯದರ್ಶಿ ಶ್ರವಣ್ ಕುಮಾರ್, ಜೇಸಿರೆಟ್ ಅಧ್ಯಕ್ಷೆ ಸಹಾನ, ಜೂನಿಯರ್ ಜೇಸಿ ಅಧ್ಯಕ್ಷ ಅವಿಝ್ ಉಪಸ್ಥಿತರಿದ್ದರು.
ಸಪ್ತಾಹದ ನಿರ್ದೇಶಕ ಸುಧಾಕರ ಶೆಟ್ಟಿ ವರದಿ ವಾಚಿಸಿದರು. ಶಾಂತಲಾ ಆಚಾರ್ಯ, ಸುಪ್ರಿಯಾ, ಮಮತಾ, ಪ್ರಸನ್ನ ಕುಮಾರಿ ಸನ್ಮಾನಪತ್ರ ವಾಚಿಸಿದರು. ಉಮೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಎಂ.ಜೆ ಸ್ಟೆಪ್ ಅಪ್ ಡಾನ್ಸ್ ಅಕಾಡೆಮಿ ಹಾಗೂ ಜೇಸಿ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸನ್ಮಾನ
ಜೆಸಿಐ ಸದಸ್ಯ ವರುಣ್ ಅವರಿಗೆ ಕಮಲ ಪತ್ರ ಪುರಸ್ಕಾರ ನೀಡಿ ಗೌರವಿಸಲಾಯಿತು. ಪತ್ರಕರ್ತ ನವೀನ್ ಸಾಲ್ಯಾನ್, ಮಾರ್ನಾಡು ಆಂಬ್ಯುಲೆನ್ಸ್ ಸಂಸ್ಥೆ ಮುಖ್ಯಸ್ಥ ಪ್ರಶಾಂತ್ ಶೆಟ್ಟಿ, ಜೆಸಿಐ ವಲಯ ಉಪಾಧ್ಯಕ್ಷ ಸುಹಾಸ್ ಮರಿಕೆ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.