ಹುಬ್ಬಳ್ಳಿ: ಸಮಯವನ್ನು ನೀವು ಗೌರವಿಸಿದರೆ ಸಮಯ ಬಂದಾಗ ಅದು ನಿಮ್ಮನ್ನು ಗೌರವಿಸುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಸಮಯವು ಬಹಳ ಮಹತ್ವದ್ದು, ಯಾವುದಕ್ಕೆ ಎಷ್ಟು ವ್ಯಯ ಮಾಡಬೇಕೆಂಬುದನ್ನು ಅರಿತುಕೊಳ್ಳಬೇಕು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹೇಳಿದರು.
ಇಲ್ಲಿಯ ಕೆಎಲ್ಇ ಸಂಸ್ಥೆಯ ಪರಪ್ಪ ಚನ್ನಪ್ಪ ಜಾಬಿನ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ವಾರ್ಷಿಕೋತ್ಸವದಲ್ಲಿ ಅತಿಥಿಗಳಾಗಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪೋಷಕರ ಜೊತೆಯಲ್ಲಿದ್ದಾಗ ಹೆಚ್ಚು ಸಾಧನೆಗೆ ಅವಕಾಶ ಇರುತ್ತದೆ, ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿದರೆ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು. ಯಾವುದೇ ಕಾರ್ಯ ಯಶಸ್ವಿಯಾದ ನಂತರ ಕೃತಜ್ಞತೆ ಮನೋಭಾವ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುವ ಉತ್ತಮ ಶಿಕ್ಷಕರನ್ನು ಸಂಸ್ಥೆ ಹೊಂದಿದೆ. ಸ್ಪರ್ಧೆ ಎನ್ನುವುದು ಸರಳವಾದುದಲ್ಲ, ಪ್ರಯತ್ನಶೀಲತೆಯಿಂದ ಅದನ್ನು ಸುಗಮಗೊಳಿಸಿಕೊಳ್ಳುವುದು ವಿದ್ಯಾರ್ಥಿಗಳ ಕೈಯಲ್ಲಿದೆ ಎಂದರು.
ಅತಿಥಿಗಳಾಗಿದ್ದ ಡಾ. ಎಸ್.ಎಸ್. ಹಿರೇಮಠ, ಡಾ. ಎಲ್.ಡಿ. ಹೊರಕೇರಿ ಮಾತನಾಡಿದರು. ಆದರ್ಶ ವಿದ್ಯಾರ್ಥಿ ಸಿದ್ಧಾರ್ಥ ಸಾಲಿಮಠ, ವಿದ್ಯಾರ್ಥಿನಿ ದಿವ್ಯಾ ವಾಲಿಕಾರ, ಅನ್ಅಜೂಮಿಂಗ್ ವಿದ್ಯಾರ್ಥಿ ಮಹಮದ್ ಸಾಹಿಲ್, ವಿದ್ಯಾರ್ಥಿನಿ ಹರ್ಷಿತಾ ಗೌಡರ, ಸ್ಪೂರ್ತಿ ಹಿರೇಮಠ ಇವರಿಗೆ ಬ್ಲೂ ರಿಬ್ಬನ್ ಪದಕ ಮತ್ತು ಪ್ರಶಸ್ತಿ ನೀಡಲಾಯಿತು.
ದೈಹಿಕ ಶಿಕ್ಷಣ ಶಿಕ್ಷಕ ಉಮೇಶ ಡಿ., ಸಿದ್ಧಾರ್ಥ ಶೇಟ್ವಾ, ಶ್ರೀನಿಧಿ ಯಲಬುರ್ಗಿ ಉಪಸ್ಥಿತರಿದ್ದರು.
ಪ್ರಾಚಾರ್ಯ ವಿ.ಆರ್. ವಾಮೋಡಿ ಸ್ವಾಗತಿಸಿದರು, ಉಪನ್ಯಾಸಕಿ ಸವಿತಾ ಎಸ್.ಎಚ್. ಪರಿಚಯಿಸಿದರು. ವೇಣುಗೋಪಾಲ ಎಚ್.ಆರ್. ಕಾಲೇಜು ವೇದಿಕೆ ವರದಿ, ಅಮ್ರಿತಾ ಅಣ್ಣಿಗೇರಿ ಕ್ರೀಡಾ ವರದಿ ವಾಚಿಸಿದರು. ಉಪನ್ಯಾಸಕಿ ವಿಜೇತಾ ಕಾಂಬ್ಳೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಉಪನ್ಯಾಸಕಿ ಗಿರಿಜಾ ಢಣಾಕ ನಿರೂಪಿಸಿದರು. ಉಪನ್ಯಾಸಕಿ ಮಂಗಲಾ ಚವ್ಹಾಣ ವಂದಿಸಿದರು.