ಜಿಲ್ಲೆ

ಜೆ.ಎಸ್.ಜಗದೀಶ್ ಸ್ನೇಹ ಬಳಗದ ವತಿಯಿಂದ ‘ಶ್ರೀ ಗುರು ಸಿದ್ಧೇಶ್ವರರಿಗೆ ನೆನಪುಗಳ ನುಡಿ ಮಲ್ಲಿಗೆ’ ಕಾರ್ಯಕ್ರಮ

ನುಡಿದಂತೆ ಸರಳವಾಗಿ ನಡೆದ ‘ಸರಳ ಸಂತ’ ಎನಿಸಿಕೊಂಡ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸಾಕಷ್ಟು ಜನರ ಬದುಕಿನಲ್ಲಿ ಸ್ಫೂರ್ತಿ ತುಂಬಿದ್ದಾರೆ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಹೇಳಿದರು.

ಜೆ.ಎಸ್.ಜಗದೀಶ್ ಸ್ನೇಹ ಬಳಗದ ವತಿಯಿಂದ ನಿವೇದಿತಾನಗರದ ಎಸ್.ಆರ್.ಸುಬ್ಬರಾವ್ ಉದ್ಯಾನದಲ್ಲಿ ಗುರುವಾರ ಆಯೋಜಿಸಿದ್ದ ‘ಶ್ರೀ ಗುರು ಸಿದ್ಧೇಶ್ವರರಿಗೆ ನೆನಪುಗಳ ನುಡಿ ಮಲ್ಲಿಗೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಡೆದಾಡುವ ದೇವರಾಗಿದ್ದ ಅವರು ನಮ್ಮನ್ನು ಅಗಲಿದ್ದರೂ ಅವರ ನೆನಪು ನಾಡಿನಲ್ಲೆಡೆ ಅಚ್ಚಳಿಯದೇ ಉಳಿದಿದೆ. ಸರಳ ಪ್ರವಚನಗಳ ಮೂಲಕ ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದ ಮಹಾನ್ ಸಂತ ಅವರು. ಕಾವಿಯನ್ನು ಧರಿಸದೆ ತಮ್ಮ ಜೀವನವಿಡೀ ಆಧ್ಯಾತ್ಮದ ಕೃಷಿ ಮಾಡಿದ ಋಷಿ ಅವರು ಎಂದು ಬಣ್ಣಿಸಿದರು.

ನಗರ ಪಾಲಿಕೆ ಮಾಜಿ ಸದಸ್ಯ ಜೆ.ಎಸ್.ಜಗದೀಶ್ ಮಾತನಾಡಿ, ಸಿದ್ಧೇಶ್ವರ ಶ್ರೀಗಳು ಒಬ್ಬ ಆಧ್ಯಾತ್ಮಿಕದ ಮಹಾಹಿಮಾಲಯ ಮತ್ತು ಮಹಾನ್ ಚೇತನ. ಅವರ ಚಿಂತನೆ, ಮಾತುಗಳನ್ನು ಮೆಲುಕು ಹಾಕಿ ಧನ್ಯತೆಯಲ್ಲಿ ತೇಲಬೇಕು. ಅವರ ವಿಚಾರ ಮೈಗೂಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಅಧ್ಯಾತ್ಮವನ್ನು ಕೇವಲ ಮೇಲ್ನೋಟಕ್ಕೆ ನೋಡಿದರೆ ಸಾಲದು, ಆಳಕ್ಕೆ ಇಳಿಯಬೇಕು. ಆಗ ಮಾತ್ರ ಶ್ರೀ ಸಿದ್ಧೇಶ್ವರ ಸ್ವಾಮೀಜಿಯಂತೆ ಬದುಕಲು ಸಾಧ್ಯ. ನಾನು ಅನೇಕ ಬಾರಿ ಶ್ರೀಗಳ ಅವರ ಪ್ರವಚನ ಕೇಳಿದ್ದೇನೆ. ಮಹಾನ್ ತಪಸ್ವಿ, ಸರಳ ಮೂರ್ತಿ, ಜ್ಞಾನಯೋಗಿಯಾಗಿದ್ದರು. ವೇದಗಳ ತಿರುಳನ್ನು ಜನರಿಗೆ ತಿಳಿಸಿ ತಲೆತೂಗುವಂತೆ ಮಾಡುತ್ತಿದ್ದರು. ಅನೇಕ ಸಂದರ್ಭದಲ್ಲಿ ಸರಳತೆಯನ್ನು ದಾರಿದ್ರ್ಯ ತಡೆಗೆ ಹೋಲಿಸಲಾಗುತ್ತದೆ. ಇದು ತಪ್ಪು ಕಲ್ಪನೆ. ಅದನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬೇಕು ಎಂದರು.

ಸಿದ್ಧೇಶ್ವರ ಶ್ರೀಗಳ ಸಂದೇಶ ಅನೇಕರಲ್ಲಿ ಸಾಕಷ್ಟು ಪರಿಣಾಮ ಬೀರಿದೆ. ಅವರ ಪ್ರವಚನದಿಂದ ಸಾಕಷ್ಟು ಜೀವನ ಮೌಲ್ಯ ಅರಿತುಕೊಂಡಿದ್ದೇನೆ. ಅವರ ವಿಚಾರವನ್ನು ಅಳವಡಿಕೊಂಡಾಗ ಮಾತ್ರ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.

ಉದ್ಯಮಿ ಆಯರಹಳ್ಳಿ ಪಿ.ವಿರೂಪಾಕ್ಷ ಮಾತನಾಡಿ, ಜ್ಞಾನದ ಗಣಿಯಾಗಿದ್ದ ಸಿದ್ಧೇಶ್ವರ ಶ್ರೀಗಳು ತತ್ವಜ್ಞಾನದ ಸಂಗಮದಂತೆ ಇದ್ದರು. ಹೀಗಾಗಿ, ಪರಿಣಾಮಕಾರಿಯಾಗಿ ಪ್ರವಚನ ನೀಡುತ್ತಿದ್ದರು. ‘ಯಾವುದನ್ನು ಶಾಶ್ವತವಾಗಿ ಇಟ್ಟಕೊಳ್ಳಬಾರದು, ಜ್ಞಾನದ ವಿಸ್ತಾರಕ್ಕೆ ಮನುಷ್ಯ ಯಾವಾಗಲೂ ತನ್ನನ್ನು ತೆರೆದುಕೊಳ್ಳಬೇಕು’ ಎಂದು ಅವರು ಯಾವಾಗಲೂ ಹೇಳುತ್ತಿದ್ದರು ಎಂದು ಸ್ಮರಿಸಿದರು.

ಬಿಜೆಪಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಮುಖಂಡರಾದ ರೇವಣ್ಣ, ಸತ್ಯಾನಂದ ವಿಟ್ಟು, ಲೋಹಿತ್ ಶರ್ಮ ಇತರರಿದ್ದರು.