ತುಮಕೂರು: ಎರಡು ದಿನಗಳ ರಾಜ್ಯ ಪ್ರವಾಸದ ಹಿನ್ನೆಲೆ ಕರ್ನಾಟಕಕ್ಕೆ ಆಗಮಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಗುರುವಾರ ಮಧ್ಯಾಹ್ನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದರು.
ಇದಕ್ಕೂ ಮುನ್ನ ತುಮಕೂರು- ಮಧುಗಿರಿ ಸಂಘಟನಾತ್ಮಕ ಜಿಲ್ಲೆಗಳ ಶಕ್ತಿಕೇಂದ್ರಗಳ ಪ್ರಮುಖರ ಮತ್ತು ಪದಾಧಿಕಾರಿಗಳ ಸಭೆಯನ್ನ ಉದ್ಘಾಟಿಸಿದ ನಡ್ಡಾ, ರಾಜ್ಯದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರತಿಯೊಬ್ಬ ಕಾರ್ಯಕರ್ತ ಶ್ರಮಿಸಬೇಕು ಎಂದು ಕರೆ ನೀಡಿದರು.
ಸಭೆ ಬಳಿಕ ಸಿದ್ಧಗಂಗಾ ಮಠಕ್ಕೆ ಆಗಮಿಸಿ ಡಾ.ಶಿವಕುಮಾರ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಚಿತ್ರದುರ್ಗದತ್ತ ನಡ್ಡಾ ಪ್ರಯಾಣ ಬೆಳೆಸಿದರು. ಮಾದಾರಚೆನ್ನಯ್ಯ ಪೀಠ, ಸಿರಿಗೆರೆಯ ತರಳಬಾಳು ಸಂಸ್ಥಾನ ಮಠಕ್ಕೆ ಭೇಟಿ ನೀಡುವರು. 6ರಂದು ಹರಿಹರದ ಶ್ರೀ ಪಂಚಮಸಾಲಿ ಮಠ, ಕನಕ ಗುರುಪೀಠ ಹಾಗೂ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠಕ್ಕೂ ನಡ್ಡಾ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯುವರು.
ಜ.6 ರಂದು ಶಿರಾದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಅಂದು ಜೆ.ಪಿ.ನಡ್ಡಾ ಜತೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸಾಥ್ ನೀಡಲಿದ್ದು ಚುನಾವಣಾ ಕಣ ಮತ್ತಷ್ಟು ರಂಗೇರಲಿದೆ.