ಜಿಲ್ಲೆ

ಮತದಾನ ಜಾಗೃತಿಗಾಗಿ ಐ ವೋಟ್

reportermys

ಮಡಿಕೇರಿ:
ಮಡಿಕೇರಿಯ ಜನರಲ್ ತಿಮ್ಮಯ್ ಕ್ರೀಡಾಂಗಣದಲ್ಲಿ ಭಾನುವಾರ ಕತ್ತಲಾವರಿಸುತ್ತಿದ್ದಂತೆಯೇ ನೂರಾರು ಜನ ಮೊಬೈಲ್ ಲೈಟ್ ಬೆಳಗುತ್ತಾ ನಾನೂ ಮತ ಹಾಕುವೆ ಎಂಬ ಸಂದೇಶ ಸಾರಿದರು. ಮಳೆಯ ಸಿಂಚನದ ನಡುವೇ ಮತದಾನದ ಮಹತ್ವವನ್ನು ವಿಭಿನ್ನವಾಗಿ ಸಾರಿದ ಕಾರ್ಯಕ್ರಮ ವಿನೂತನ ರೀತಿಯಲ್ಲಿ ಗಮನ ಸೆಳೆಯಿತು.

ಜಿಲ್ಲೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ಮಡಿಕೇರಿ ರೋಟರಿ ಸಂಸ್ಥೆ, ರೋಟರಿ ಮಿಸ್ಟಿ ಹಿಲ್ಸ್, ರೋಟರಿ ವುಡ್ಸ್ ಸಹಯೋಗದೊಂದಿಗೆ, ವಿವಿಧ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮೊಬೈಲ್ ಲೈಟ್ ಬೆಳಗಿಸಿ ನಾನೂ ಮತಹಾಕುವೆ ಎಂಬ ಸಂದೇಶ ಸಾರುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಜಿಲ್ಲಾ ಕ್ರೀಡಾಂಗಣದಲ್ಲಿ ನೂರಾರು ಜನ ಸೇರಿ, ಸಾಲಾಗಿ ನಿಗದಿತ ಸ್ಥಳದಲ್ಲಿ ನಿಂತು ಮೊಬೈಲ್ ಲೈಟ್ ಬೆಳಗಿಸಿ ನಾನೂ ವೋಟ್ ಹಾಕುವೆ ಎಂಬ ಸಂದೇಶ ಸಾರಿದರು. ಮತದಾನದ ಮಹತ್ವದ ಕುರಿತಂತೆ ಮಾತನಾಡಿದ ಕೊಡಗು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಮೇ ೧೦ ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಪ್ರತೀಯೋರ್ವರೂ ಮತದಾನ ಮಾಡುವಂತೆ ಕೋರಿದರು. ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಎಸ್.ಆಕಾಶ್, ಈಗಾಗಲೇ ಕಡಮೆ ಮತದಾನದ ಮತಗಟ್ಟೆಗಳನ್ನು ಗುರುತಿಸಲಾಗಿದ್ದು ಈ ಚುನಾವಣೆಯಲ್ಲಿ ತಮ್ಮ ಹೊಣೆ ಅರಿತು ಎಲ್ಲ ಮತದಾರನೂ ತನ್ನ ಹಕ್ಕು ಚಲಾಯಿಸಬೇಕೆಂದು ಹೇಳಿದರು.

ಕಾರ್ಯಕ್ರಮದ ಪ್ರಯುಕ್ತ ಕುಶಾಲನಗರದ ಚಿತ್ರಕಲಾ ಶಿಕ್ಷಕ, ಕೊಡಗು ಜಿಲ್ಲಾ ಚುನಾವಣಾ ರಾಯಭಾರಿ ಬಸವರಾಜ ಬಡಿಗೇರ್ ತಂಡದಿಂದ ಹಾಡುಗಾರಿಕೆ ಆಯೋಜಿಸಲಾಗಿತ್ತು. ಬಸವರಾಜ್ ಪುತ್ರಿ ಖಾಸಗಿ ವಾಹಿನಿ ಸಂಗೀತ ಸ್ಪರ್ಧೆ ವಿಜೇತೆ ಕುಶಾಲನಗರದ ಪ್ರಗತಿ ಬಡಿಗೇರ್, ಸಹೋದರಿಯರಾದ ಪ್ರತಿಕ್ಷಾ ಬಡಿಗೇರ್, ತ್ರಿವೇಣಿ ಬಡಿಗೇರ್, ಮಡಿಕೇರಿ ತಾಲೂಕು ಜಾನಪದ ಪರಿಷತ್ ಯುವಬಳಗದ ಶ್ರೀರಕ್ಷಾ ಪ್ರಭಾಕರ್, ಅಮೃತ್ ರಾಜ್, ಅನಿತ್ ರಾಜ್ ತಂಡದಿಂದಲೂ ಹಾಡುಗಳು ಮನಸೆಳೆದವು. ಕೊಡಗು ಚುನಾವಣಾ ರಾಯಭಾರಿಗಳಾದ ಕೆ.ರವಿಮುತ್ತಪ್ಪ, ಎಸ್.ಕೆ. ಈಶ್ವರಿ ಹಾಜರಿದ್ದು ಮತದಾನದ ಮಹತ್ವದ ಬಗ್ಗೆ ಮಾತನಾಡಿದರು.

ರಾಜ್ಯದಲ್ಲಿಯೇ ವಿನೂತನ ರೀತಿಯಲ್ಲಿ ಆಯೋಜಿತವಾಗಿದ್ದ ಈ ಕಾರ್ಯಕ್ರಮವನ್ನು ರೋಟರಿ ಸಂಸ್ಥೆಯ ಪರವಾಗಿ ಅನಿಲ್ ಎಚ್.ಟಿ. ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಂ.ಧನಂಜಯ್ ನಿರ್ವಹಿಸಿದರು. ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ರಾಜಗೋಪಾಲ್, ಸ್ವೀಪ್ ನೋಡಲ್ ಅಧಿಕಾರಿ ನವೀನ್ , ಯುವಜನ ಸೇವೆ ಮತ್ತು ಕ್ರೀಡಾ ಇಲಾಖಾಧಿಕಾರಿ ವಿಸ್ಮಯಿ, ರೋಟರಿ ಸಂಸ್ಥೆಯ ಪ್ರಮುಖರು, ಲಯನ್ಸ್ ಕ್ಲಬ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಇದ್ದರು.