ಬಸವನಬಾಗೇವಾಡಿ: ತಾಲೂಕಿನ ಇವಣಗಿ ಗ್ರಾಮದ ವರದಾನಿ ಲಕ್ಕಮ್ಮದೇವಿ ದೇವಸ್ಥಾನ ಆವರಣದಲ್ಲಿ ಡಿ.2 ರಂದು 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ ಎಂದು ಕ.ಸಾ.ಪ ಜಿಲ್ಲಾ ಅಧ್ಯಕ್ಷ ಹಾಸಿಂಪೀರ ವಾಲೀಕಾರ ತಿಳಿಸಿದ್ದಾರೆ.
ಬೆಳಗ್ಗೆ 8 ಗಂಟೆಗೆ ಧ್ವಜಾರೋಹಣ ನೆರವೇರಲಿದ್ದು ಕರಿಭಂಟನಾಳದ ಶಿವಕುಮಾರ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ. ರಾಷ್ಟ್ರ ಧ್ವಜಾರೋಹಣವನ್ನು ಬಸವರಾಜ ಸೋಮಪುರ, ನಾಡಧ್ವಜಾರೋಹಣವನ್ನು ಎಂ.ಎಂ. ಹಳ್ಳೂರ, ಪರಿಷತ್ ಧ್ವಜಾರೋಹಣವನ್ನು ಶಿವಾನಂದ ಡೋಣೂರ, ಪುಸ್ತಕ ಮಳಿಗೆ ಉದ್ಘಾಟನೆಯನ್ನು ರಾಜು ಇವಣಗಿ, ದಾಸೋಹಮನೆ ಉದ್ಘಾಟನೆಯನ್ನು ನಿಂಗಣ್ಣ ಬಾಗೇವಾಡಿ ನೆರವೇರಿಸಲಿದ್ದಾರೆ.
ಬೆಳಗ್ಗೆ 8.30ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿ ನೆರವೇರಿಸುವರು. ಬೆಳಗ್ಗೆ 10ಕ್ಕೆ ಸಮ್ಮೇಳನದ ಉದ್ಘಾಟನೆ ವರದಾನಿ ಲಕ್ಕಮ್ಮದೇವಿ ವೇದಿಕೆಯಲ್ಲಿ ಜರುಗಲಿದೆ. ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಕ.ಸಾ.ಪ ಜಿಲ್ಲಾ ಅಧ್ಯಕ್ಷ ಹಾಸಿಂಪೀರ ವಾಲೀಕಾರ ವಹಿಸಲಿದ್ದಾರೆ.
ಕರ್ನಾಟಕ ಸುವರ್ಣ ಸಂಭ್ರಮ 50ರ ನಿಮಿತ್ತ ಬಸವನಬಾಗೇವಾಡಿ ಕ.ಸಾ.ಪ ಘಟಕದಿಂದ ಐದು ವಿಶೇಷ ಸಾಧಕರಾದ ಬಸವರಾಜ ಹಾರಿವಾಳ, ಲೋಕನಾಥ ಅಗರವಾಲ, ಎನ್.ಬಿ. ದಾಸರ, ಸಿದ್ಧಪ್ಪ ಆಲಗೊಂಡ, ವಿದ್ಯಾರ್ಥಿನಿ ಪ್ರಿಯಾಂಕ ಲಮಾಣಿ ಅವರನ್ನು ಸನ್ಮಾನಿಸಲಾಗುವುದು.
ಸಂಜೆ 7.30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶ್ರೀಗಳು, ಮನಗೂಳಿ-ಬೆಂಗಳೂರು ವಿಭೂತಿಪುರ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯರು, ಸಂಗಯ್ಯಸ್ವಾಮಿ ಕೊಡೆಕಲ್ಲಮಠ ಸಾನ್ನಿಧ್ಯ ವಹಿಸುವರು. ಅಧ್ಯಕ್ಷತೆಯನ್ನು ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ವಹಿಸುವರು. ರಾತ್ರಿ 8.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಗಳು ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ.