ಜಿಲ್ಲೆ

ಸಂಘಟಿತ ಹೋರಾಟದಿಂದ ಯಶಸ್ಸು ನಿವೃತ್ತ ಸರ್ಕಾರಿ ನೌಕರರ ರಾಜ್ಯ ಕಾರ‌್ಯಕಾರಿಣಿ ಸಭೆಯಲ್ಲಿ ಐವನ್ ಡಿಸೋಜ ಹೇಳಿಕೆ

ಮಂಗಳೂರು: ಸರ್ಕಾರದ ವ್ಯವಸ್ಥೆಯಲ್ಲಿ ಬೇಡಿಕೆ ಈಡೇರಿಕೆಗೆ ಸಂಘಟಿತವಾಗಿ ನಿರಂತರ ಹೋರಾಟ ಮಾಡಿದಾಗ ಯಶಸ್ಸು ಸಿಗಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.

ನಗರದ ಎಸ್‌ಸಿಡಿಸಿಸಿ ಬ್ಯಾಂಕ್‌ನ ಸಭಾಂಗಣದಲ್ಲಿ ಶುಕ್ರವಾರ ಕರ್ನಾಟಕ ನಿವೃತ್ತ ನೌಕರರ ವೇದಿಕೆ ಕೇಂದ್ರ ಸಮಿತಿ ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ನಿವೃತ್ತ ನೌಕರರ ವೇದಿಕೆ ಮಂಗಳೂರು 2022 ಜು.1ರಿಂದ 2024 ಜು.31ರ ಅವಧಿಯಲ್ಲಿ ನಿವೃತ್ತರಾದ ಸರ್ಕಾರಿ ನೌಕರರ ರಾಜ್ಯ ಕಾರ‌್ಯಕಾರಿಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಸಿಎಂ ಮನೆ ಮುಂದೆ ಧರಣಿಗೆ ಚಿಂತನೆ: ಕರ್ನಾಟಕ ನಿವೃತ್ತ ನೌಕರರ ವೇದಿಕೆ ಕೇಂದ್ರ ಸಮಿತಿ ಬೆಂಗಳೂರು ಇದರ ರಾಜ್ಯ ಮಹಾಪ್ರಧಾನ ಸಂಚಾಲಕ ಡಾ.ಎಂ.ಪಿ.ಎಂ. ಷಣ್ಮುಖಯ್ಯ ಮಾತನಾಡಿ, ಇದು ಸರ್ಕಾರ ಮಾಡಿದ ಅನ್ಯಾಯವಲ್ಲ. ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಅಧ್ಯಕ್ಷ ಸಿ.ಎಚ್.ಷಡಕ್ಷರಿ ಮತ್ತು ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಎಲ್.ಭೈರಪ್ಪ ಅವರು 7ನೇ ವೇತನ ಆಯೋಗದ ವರದಿ ಒಪ್ಪಿ ಮಂಜೂರು ಮಾಡಿದ ಮಹಾತ್ಮರು ಅವರಿಂದ ನಾವು ಹಿರಿಯ ನಾಗರಿಕರು ಬೀದಿಗೆ ಇಳಿದು ಪ್ರತಿಭಟನೆ ಮಾಡಬೇಕಾಗಿ ಬಂತು. ನವೆಂಬರ್‌ನಲ್ಲಿ ಮೈಸೂರಿನ ಸಿಎಂ ಮನೆ ಮುಂದೆ ನಿವೃತ್ತ ಸರ್ಕಾರಿ ನೌಕರರಿಂದ ಧರಣಿ ಮಾಡುವ ಜತೆಗೆ ಬೆಳಗಾವಿಯಲ್ಲಿ ಡಿಸೆಂಬರ್‌ನಲ್ಲಿ ನಡೆಯುವ ಚಳಿಗಾಲ ಅಧಿವೇಶನಕ್ಕೆ ಪಾದಯಾತ್ರೆಯನ್ನು ಕೈಗೊಳ್ಳುವ ಕಾರ‌್ಯ ಮಾಡಲಾಗುತ್ತದೆ ಎಂದರು.

ಪರಿಷ್ಕೃತ ಆದೇಶ ನೀಡಿ: ದಕ್ಷಿಣ ಕನ್ನಡ ಜಿಲ್ಲಾ ನಿವೃತ್ತ ನೌಕರರ ವೇದಿಕೆ ಮಂಗಳೂರು ಇದರ ಜಿಲ್ಲಾ ಸಂಚಾಲಕ ಸಿರಿಲ್ ರಾಬರ್ಟ್ ಡಿಸೋಜ ಮಾತನಾಡಿ, ಸುಮಾರು 25-40 ವರ್ಷಗಳ ಕಾಲ ಸರ್ಕಾರದ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತರಾದಂತಹ ನೌಕರರಿಗೆ ಸಂಧ್ಯಾಕಾಲದಲ್ಲಿ ಆರ್ಥಿಕವಾಗಿ ವಂಚಿತರನ್ನಾಗಿ ಮಾಡುವುದು ಸರಿಯಲ್ಲ. ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಪೂರ್ಣ ಪ್ರಮಾಣದ ವೇತನ ಪಡೆಯುತ್ತಿದ್ದಾರೆ. ನಿವೃತ್ತ ನೌಕರರ ಮೇಲೆ ಯಾಕೆ ಈ ತಾರತಮ್ಯ ಮಾಡಲಾಗುತ್ತಿದೆ ಎಂದರು.

ರಾಜ್ಯ ಸಂಚಾಲಕರಾದ ಅಶೋಕ ಎಂ. ಸಜ್ಜನ, ಶಂಕರಪ್ಪ ಲಮಾಣಿ, ಎಸ್.ಬಿ. ಬಿಸೇರೊಟ್ಟಿ, ಮಹಾಂತೇಶ ವಿ. ಹಿರೇಮಠ ಸೇರಿದಂತೆ ರಾಜ್ಯದ 31 ಜಿಲ್ಲೆಗಳಿಂದ ಬಂದ ಪ್ರಧಾನ ಸಂಚಾಲಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿಜಯನಗರದ ಹುಳು ಬಸಪ್ಪ ವಂದಿಸಿದರು. ಮಂಡ್ಯದ ನಾರಾಯಣ ಸ್ವಾಮಿ ಕಾರ‌್ಯಕ್ರಮ ನಿರೂಪಿಸಿದರು.