ಜಿಲ್ಲೆ

ಸಂಪಾದಕೀಯವೂ ವಾಣಿಜ್ಯೀಕರಣ ಆಗುತ್ತಿರುವುದು ಸರಿಯಲ್ಲ

ಮರಿದೇವ ಹೂಗಾರ

ಹುಬ್ಬಳ್ಳಿ: ಪತ್ರಿಕೋದ್ಯಮ ತನ್ನ ಮಗ್ಗಲು ಬದಲಿಸುತ್ತ ಸಾಗಿದೆ. ಈಗ ಉದ್ಯಮ ಆಗಿ ಹೋಗಿದೆ. ಆದರೆ, ಸಂಪಾದಕೀಯವೂ ವಾಣಿಜ್ಯೀಕರಣವಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಬೇಸರ ವ್ಯಕ್ತಪಡಿಸಿದರು.

ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇಲ್ಲಿ ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸಭಾಂಗಣದಲ್ಲಿ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಸಂಪಾದಿತ ‘ಉತ್ತರದ ಸಾಲು ದೀಪಗಳು’ ಕೃತಿ ಭಾನುವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಹಿಂದಿನ ಪತ್ರಕರ್ತರು ಮಾಧ್ಯಮದ ಮೌಲ್ಯಗಳನ್ನು ಬಹು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಆ ಕಾಲಘಟ್ಟದಲ್ಲಿ ಹುಬ್ಬಳ್ಳಿಯಲ್ಲಿ ಮಾತನಾಡಿದರೆ, ದೆಹಲಿಯಲ್ಲಿ ಪ್ರತಿಧ್ವನಿಸುತ್ತಿತ್ತು. ಪ್ರಸ್ತುತ ದಿನಗಳಲ್ಲಿ ಅದು ಸಾಧ್ಯವಾಗುತ್ತಿಲ್ಲ. ಇಂದಿನ ದಿನಗಳಲ್ಲಿ ಪತ್ರಕರ್ತರು ಮಾಲೀಕರ ಗುಲಾಮರಾಗಿದ್ದಾರೆ. ಮಾಲೀಕರ ಮೂಗಿನ ನೇರಕ್ಕೆ ಸುದ್ದಿ ಬರೆಯುವುದನ್ನು ಬಿಟ್ಟರೆ ರಾಜಕಾರಣಿಗಳು, ಪತ್ರಕರ್ತರಿಗೆ ಗೌರವ ಕೊಡುತ್ತಾರೆ. ಇಲ್ಲವಾದಲ್ಲಿ ರಾಜಕಾರಣಿಗಳು ವ್ಯಾವಹಾರಿಕವಾಗಿ ಮಾತನಾಡಿ ಸುಮ್ಮನಾಗುತ್ತಾರೆ ಎಂದರು.

ಹಿರಿಯ ಪತ್ರಕರ್ತ ದಿನೇಶ ಅಮಿನ್‌ಮಟ್ಟು ಮಾತನಾಡಿ, ಹಿಂದೆ ಮಾಧ್ಯಮಗಳಿಗೆ ಇದ್ದ ಬೆಲೆ, ಗೌರವ ಪ್ರಸ್ತುತ ದಿನಗಳಲ್ಲಿಲ್ಲ. ಪತ್ರಕರ್ತರು ಸೂಕ್ಷ್ಮ ಹಾಗೂ ಭಾವಜೀವಿಗಳು. ಭಾವನೆಗಳಿಲ್ಲದವರಿಗೆ ಸೃಜನಾತ್ಮಕವಾಗಿ ಬರೆಯಲು ಸಾಧ್ಯವಿಲ್ಲ. ಹೊಸ ಆರ್ಥಿಕ ನೀತಿ ಬಂದಾಗಿನಿಂದ ಮಾಧ್ಯಮ ಉದ್ಯಮವಾಗಿದೆ. ಉದ್ಯಮದಲ್ಲಿ ಧರ್ಮವಿರಬೇಕು. ಆದರೆ, ಪ್ರಸ್ತುತ ಉದ್ಯಮಗಳು ಸರ್ಕಾರಿ ಉದ್ಯಮಗಳನ್ನು ನುಂಗಿ ಹಾಕುತ್ತಿವೆ. ಹೊಸ ಆರ್ಥಿಕ ನೀತಿಯಿಂದ ಕಾಪೋರೇಟ್ ವ್ಯವಸ್ಥೆ ಜಾರಿಗೆ ಬಂತು. ಇದರಿಂದಾಗಿ ಪತ್ರಿಕೆಗಳಲ್ಲಿ ಸುದ್ದಿಗಿಂತ ಜಾಹೀರಾತು ರಾರಾಜಿಸುತ್ತಿವೆ. ಅದೇ ರೀತಿ ಪತ್ರಿಕೋದ್ಯಮಕ್ಕೆ ರಾಜಕಾರಣಿಗಳ ಪ್ರವೇಶವಾಗಿದೆ. ಇದರೊಂದಿಗೆ ಸಾಮಾನ್ಯ ಮನುಷ್ಯನ ಸುದ್ದಿ ಹಸಿವು ಕಡಿಮೆಯಾಗಿದೆ ಎಂದರು.

ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಉತ್ತರದ ಸಾಲು ದೀಪಗಳು ಕೃತಿಯು ಉತ್ತರ ಕರ್ನಾಟಕ ಭಾಗದ ಪತ್ರಕರ್ತರಿಗೆ ನೀಡಿದ ಅಮೂಲ್ಯ ಕೊಡುಗೆ. ಈ ಕೃತಿಯನ್ನು ಬಹಳ ನಿಷ್ಠೆ, ಪರಿಶ್ರಮದಿಂದ ಸಿದ್ಧಪಡಿಸಿರುವುದು ಶ್ಲಾಘನೀಯ ಎಂದರು.

ಕೃತಿ ಸಂಪಾದಕ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿದರು.

ನಿವೃತ್ತ ವಾರ್ತಾಧಿಕಾರಿ ಪಿ.ಎಸ್. ಪರ್ವತಿ ಪುಸ್ತಕ ವಿಮರ್ಶೆ ಮಾಡಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ರಾಜ್ಯ ಕಾರ್ಯಕಾರಣಿ ಸದಸ್ಯ ಗಣಪತಿ ಗಂಗೊಳ್ಳಿ, ಧಾರವಾಡ ಜಿಲ್ಲಾಧ್ಯಕ್ಷ ಲೋಚನೇಶ ಹೂಗಾರ, ಮಾಧ್ಯಮ ಅಕಾಡೆಮಿ ಸದಸ್ಯ ಅಬ್ಬಾಸ್ ಮುಲ್ಲಾ ಇತರರು ಇದ್ದರು.