ಜಿಲ್ಲೆ

ಆಯ್.ಟಿ.ಆಯ್.ಕಾಲೇಜು ಕಟ್ಟಡ ಲೋಕಾರ್ಪಣೆಗೊಳಿಸಿದ ಶಾಸಕ ಸಿ.ಸಿ.ಪಾಟೀಲ

Gadag - Shivanand Hiremath

ಗದಗ: ಹೊಂಬಳದಲ್ಲಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಟ್ಟಡ ಉತ್ತಮವಾಗಿ ಕಟ್ಟಡ ನಿರ್ಮಿಸಲು ಭೂದಾನ ಮಾಡಿದ ಮೈಲಾರ ಕುಟುಂಬಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಾಸಕ ಸಿ.ಸಿ.ಪಾಟೀಲ ನುಡಿದರು.

ಸರಕಾರಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಶ್ರೀಮತಿ ಪಾರ್ವತಮ್ಮ ಮತ್ತು ಶಂಕರಪ್ಪ ಮೈಲಾರ ಸ್ಮಾರಕ, ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಹೊಂಬಳದಲ್ಲಿ ನಿರ್ಮಿಸಲಾದ ಆಯ್.ಟಿ.ಆಯ್. ಕಟ್ಟಡವನ್ನು ಬುಧವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಬಾಡಿಗೆ ಕಟ್ಟಡದಲ್ಲಿ ತರಬೇತಿ ಸಂಸ್ಥೆ ಹಲವಾರು ವರ್ಷಗಳಿಂದ ನಡೆಯುತ್ತಿತ್ತು. ಇದನ್ನು ಅರಿತ ಮೈಲಾರ ಕುಟುಂಬಸ್ಥರು ತಮ್ಮ ಸ್ವಂತ ಎರಡು ಎಕರೆ ಜಮೀನನ್ನು ಕಾಲೇಜು ನಿರ್ಮಾಣಕ್ಕೆ ಭೂದಾನ ಮಾಡುವ ಮೂಲಕ ಈ ಭಾಗದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡಿದ್ದಾರೆ. ಅವರಿಗೆ ಭಗವಂತ ಇನ್ನೂ ಹೆಚ್ಚಿನ ಆರ್ಥಿಕ ಶಕ್ತಿ ದಯಪಾಲಿಸಲಿ ಎಂದು ಹೇಳಿದರು.

ಲೋಕೊಪಯೋಗಿ ಸಚಿವನಾಗಿದ್ದ ಸಮಯದಲ್ಲಿ ಈ ಕಾಲೇಜು ಕಟ್ಟಡ ನಿರ್ಮಾಣಕ್ಕೆ 2.19 ಕೋಟಿ ರೂ. ಅನುದಾನ ಒದಗಿಸುವ ಮೂಲಕ ಸುಂದರ ಕಟ್ಟಡ ನಿರ್ಮಾಣಕ್ಕೆ 2019ರಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಇಂದು ಉದ್ಘಾಟನೆ ಆಗಿರುವದು ಸಂತಸ ತಂದಿದೆ ಎಂದರು.

ಈ ತರಬೇತಿ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ತಮ್ಮ ಜೀವನವನ್ನು ಉತ್ತಮವಾಗಿಸಿಕೊಳ್ಳಬೇಕು. ಕಾಲೇಜು ಪ್ರಾಚಾರ್ಯರು ಕೆಲವು ಬೇಡಿಕೆಗಳನ್ನು ಇಟ್ಟಿದ್ದು ಇನ್ನೆರೆಡು ಹೊಸ ಕೋರ್ಸಗಳನ್ನು ಆರಂಭಿಸಲು ನಾನು ಮತ್ತು ಶಾಸಕರಾದ ಎಸ್.ವಿ.ಸಂಕನೂರ ಸೇರಿಕೊಂಡು ಪ್ರಯತ್ನಿಸುವುದಾಗಿ ತಿಳಿಸಿದರು. ಅಲ್ಲದೇ ಕಾಲೇಜು ಕಟ್ಟಡದ ಸುತ್ತಲೂ ಕಂಪೌAಡ ನಿರ್ಮಿಸಲು ಉದ್ಯೋಗ ಖಾತ್ರಿಯಡಿ ಕಾಮಗಾರಿ ಹಂತ ಹಂತವಾಗಿ ನಿರ್ವಹಿಸಲು ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು. ಹಾಗೂ ಮುಖ್ಯ ರಸ್ತೆಯಿಂದ ಕಾಲೇಜಿಗೆ ಬರಲು ಉತ್ತಮ ರಸ್ತೆ ನಿರ್ಮಾಣ ಮಾಡಿಕೊಡುವದಾಗಿ ಭರವಸೆ ನೀಡಿದರು.

ಕಾಲೇಜಿನ ಮೂಲ ಸೌಕರ್ಯ ಅಭಿವೃದ್ಧಿಗೆ ಸರ್ಕಾರದಿಂದ ಅಗತ್ಯ ಅನುದಾನ ಕೊಡಿಸುತ್ತೇವೆ. ಆದರೆ ಕಾಲೇಜಿನಲ್ಲಿ ಕಲಿತ ವಿಧ್ಯಾರ್ಥಿಗಳು ಉತ್ತಮ ನೌಕರ ಅಥವಾ ಉದ್ಯಮ ಆರಂಭಿಸುವ ಮೂಲಕ ಈ ಕಾಲೇಜಿಗೆ ಹೆಸರು ತರಬೇಕೆಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ ವಿಜ್ಞಾನ ಮತ್ತು ತಂತ್ರಜ್ಞಾನ ದೇಶದ ಪ್ರಗತಿಯಲ್ಲಿ ತಮ್ಮದೇ ಆದ ಪ್ರಮುಖ ಸ್ಥಾನವನ್ನು ಹೊಂದಿದೆ. ಈ ಕಾರಣಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿದ್ದ ಆಯ್.ಆಯ್.ಟಿ. ಕಾಲೇಜುಗಳ ಸಂಖ್ಯೆಯನ್ನು 16 ರಿಂದ 23ಕ್ಕೆ ವಿಸ್ತರಿಸಿದ್ದಾರೆ. ಹಾಗೂ ತ್ರಿಬಲ್ ಆಯ್.ಟಿ. 9 ರಿಂದ 25ಕ್ಕೆ ಹೆಚ್ಚಿಸುವ ಮೂಲಕ ವಿಜ್ಞಾನ ತಂತ್ರಜ್ಞಾನಕ್ಕೆ ಒತ್ತು ನೀಡಿದ್ದಾರೆ ಎಂದರು.

ಧಾರವಾಡದಲ್ಲಿ ಆಯ್.ಆಯ್.ಟಿ ಕೇಂದ್ರವನ್ನು ಇತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದರು. ಹಾಗೂ ಹುಬ್ಬಳ್ಳಿ-ಧಾರವಾಡ ನಡುವೆ ತ್ರಿಬಲ್ ಆಯ್.ಟಿ. ಕೇಂದ್ರಕ್ಕೆ ರಾಷ್ಟçಪತಿ ಯವರು ಚಾಲನೇ ನೀಡಿದ್ದಾರೆ. ದೇಶದ ಯುವಕರಿಗೆ ಕೌಶಲ್ಯ ವೃದ್ಧಿಸುವ ಉದ್ದೇಶದಿಂದ 2019ರಲ್ಲಿ ಕೌಶಲಾಭಿವೃದ್ಧಿ ಇಲಾಖೆ ಪ್ರಾರಂಭಿಸುವ ಮೂಲಕ ಯುವಜನರ ಕೌಶಲ್ಯ ವೃದ್ಧಿಗೆ ಮುಂದಾಗಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಭೂದಾನಿಗಳಾದ ಶೇಖರಪ್ಪ ಶಿವಪ್ಪ ಮೈಲಾರ ಕುಟುಂಬ ವರ್ಗದವರನ್ನು ಶಾಸಕ ಸಿ.ಸಿ.ಪಾಟೀಲ ಅವರು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ಭೀಮಾಂಬಿಕಾ ಹಾಲನವರ, ಉಪಾಧ್ಯಕ್ಷೆ ನೀಲಮ್ಮ ಬಾಲಮ್ಮನವರ ಸೇರಿದಂತೆ ಗಣ್ಯರಾದ ಯಲ್ಲಪ್ಪ ಮೈಲಾರ, ವಸಂತಪ್ಪ ಗಣಾಚ, ಮಲ್ಲಪ್ಪ ಹುಣಸಿಕಟ್ಟಿ, ಅಂದಾನಪ್ಪ ಯಕ್ಲಾಸಪುರ, ರಾಜಣ್ಣ, ನಿಂಗಪ್ಪ ಮಣ್ಣೂರ, ಸರಕಾರಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಜಂಟಿ ನಿರ್ದೇಶಕ ಬಸವಪ್ರಭು ಸೇರಿದಂತೆ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ, ಕಾಲೇಜು ವಿಧ್ಯಾರ್ಥಿಗಳು ಹಾಜರಿದ್ದರು. ಕಾಲೇಜು ಪ್ರಾಚಾರ್ಯ ಮಲ್ಲೂರ ಬಸವರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು.