ಜಿಲ್ಲೆ

ಸದಸ್ಯರ ಎದೆಯಲ್ಲಿ ತಳಮಳ ಶುರು

ಮುತ್ತು ಕುಪ್ಪಸ್ತ, ನಿಡಗುಂದಿ

ತಾಲೂಕಿನಲ್ಲಿ ಡಿ. 22 ರಂದು ನಡೆದ ಗ್ರಾಮ ಪಂಚಾಯಿತಿಗಳ ಚುನಾವಣೆ ಬೆನ್ನಲ್ಲೇ ಸದ್ಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಸದಸ್ಯರಲ್ಲಿ ತಳಮಳ ಆರಂಭವಾಗಿದೆ. ತಾಲೂಕಿನಲ್ಲಿ ಒಟ್ಟು 11 ಗ್ರಾಪಂಗಳಿದ್ದು, ಅದರಲ್ಲಿ 8 ಗ್ರಾಪಂಗಳಿಗೆ ಚುನಾವಣೆ ನಡೆಸಲಾಗಿತ್ತು. 8 ಗ್ರಾಪಂ ಪೈಕಿ 144 ಸದಸ್ಯರು ಆಯ್ಕೆಯಾಗಿದ್ದರು. ಜ.16 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮೀಸಲಾತಿ ಪ್ರಕಟವಾಗಿತ್ತು. ಈಗ ಮೀಸಲಾತಿಯನ್ವಯ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ದಿನ ನಿಗದಿಪಡಿಸಿದ್ದು, ಸರ್ಕಾರ ಹಳ್ಳಿ ಫೈಟ್‌ಗೆ ಕೊನೆ ಮೊಳೆ ಹೊಡೆಯಲು ಸಜ್ಜಾಗಿದೆ. ಮೀಸಲಾತಿ ಪ್ರಕಟವಾದ ಬೆನ್ನಲ್ಲೆ ಸದಸ್ಯರ ಗದ್ದುಗೆಗಾಗಿ ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಸಂಖ್ಯಾ ಬಲ ಕಾಯ್ದಿರಿಸಿಕೊಳ್ಳಲು ವಿವಿಧ ಕಸರತ್ತು ನಡೆಸುತ್ತಿದ್ದಾರೆ. ಕೆಲವರು ಮೀಸಲಾತಿ ಪ್ರಕಟವಾದ ಕ್ಷಣದಿಂದ ತಮ್ಮ ಸಂಖ್ಯಾಬಲಕ್ಕೆ ಬೇಕಾದ ಸದ್ಯರನ್ನು ಹಿಡಿದಿಡಲು ಅಲ್ಲಲ್ಲಿ ಪ್ರವಾಸ ಕೈಗೊಂಡಿದ್ದರೆ, ಕೆಲವರು ತೆರೆಮರೆಯಲ್ಲಿ ಗುದ್ದಾಟ ನಡೆಸುತ್ತಿದ್ದಾರೆ. ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಗುಪ್ತ ಮತದಾನ ನಡೆಯಲಿದ್ದು, ಯಾರು ಯಾರ ಪರ ಮತದಾನ ಮಾಡಲಿದ್ದಾರೆ ಎನ್ನುವುದು ನಿಖರವಾಗಿ ಹೇಳಲಾಗದು. ಜಾತಿ ಲೆಕ್ಕಾಚಾರ, ಪಕ್ಷ ಲೆಕ್ಕಾಚಾರಗಳು ಪ್ರಮುಖವಾಗಲಿದೆ. ಆಯಾ ಪಕ್ಷದ ನಾಯಕರು ತಮ್ಮ ಪಕ್ಷದವರನ್ನು ಅಧ್ಯಕ್ಷರನ್ನಾಗಿಸಿದರೆ ನಮಗೆ ಚುನಾವಣೆ ಎದುರಿಸಲು ಸರಳವಾಗುತ್ತದೆ ಎಂದು ತಮ್ಮ ಪಕ್ಷದ ವ್ಯಕ್ತಿಯ ಪರ ಬ್ಯಾಟಿಂಗ್ ನಡೆಸಿ ಸದಸ್ಯರ ಮನವೊಲಿಕೆ ಕಾರ್ಯ ನಡೆಸುತ್ತಿದ್ದಾರೆ. ಕೆಲವರು ಜಾತಿ ಲೆಕ್ಕಾಚಾರವನ್ನಿಟ್ಟುಕೊಂಡು ಸದಸ್ಯರ ಮನ ಗೆಲ್ಲಲು ಮುಂದಾಗಿದ್ದರೆ, ಮತ್ತೆ ಕೆಲವು ಗ್ರಾಮದಲ್ಲಿ ಹಿರಿಯರ ಮಾತೇ ಅಂತಿಮವೆಂದು ತಿಳಿದು ಅವರ ಅಣತಿಯಂತೆ ನಡೆಯಲಿದ್ದಾರೆ. ಇದರ ಜತೆಗೆ ಅಲ್ಲಲ್ಲಿ ಕುದುರೆ ವ್ಯಾಪಾರ ನಡೆಯುವುದನ್ನು ಅಲ್ಲಗಳೆಯುವಂತಿಲ್ಲ. ಒಟ್ಟಾರೆ ಚುನಾವಣೆೆ ಸಮೀಪವಾಗುತ್ತಿದ್ದಂತೆ ಕಸರತ್ತು ಜೋರಾಗಿ ನಡೆಯುತ್ತಿದೆ.

ಚುನಾವಣೆ ವಿವರ

ಫೆ.2 ರಂದು ಹೆಬ್ಬಾಳ, ಗೊಳಸಂಗಿ, ವಂದಾಲ, ಆಲಮಟ್ಟಿ ಗ್ರಾಮ ಪಂಚಾಯತಿ. ಫೆ. 4 ರಂದು ಇಟಗಿ, ಬಿರಲದಿನ್ನಿ, ಬೇನಾಳ ಆರ್.ಸಿ, ಚಿಮ್ಮಲಗಿ ಗ್ರಾಮ ಪಂಚಾಯತಿಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಬೆಳಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ನಾಮಪತ್ರ ಸಲ್ಲಿಕೆ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಸಭೆ, ನಂತರ ನಾಮಪತ್ರ ಪರಿಶೀಲನೆ, ಪರಿಶೀಲನೆ ನಂತರ 10 ನಿಮಿಷದಲ್ಲಿ ನಾಮಪತ್ರ ವಾಪಸ್ ಪಡೆಯಲು ಅವಕಾಶವಿದೆ. ನಂತರ ಅವಶ್ಯವಿದ್ದಲ್ಲಿ ಮತದಾನ, ಮತ ಎಣಿಕೆ, ಲಿತಾಂಶ ಘೋಷಣೆ ನಡೆಸಲಾಗುತ್ತದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಮೀಸಲಾತಿಯನ್ವಯ ಸದಸ್ಯರ ವಿವರ

ಹೆಬ್ಬಾಳ ಗ್ರಾಪಂ: ಇಲ್ಲಿ ಒಟ್ಟು 13 ಸದಸ್ಯರಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಎಸ್.ಸಿ ಮಹಿಳೆಗೆ ಮೀಸಲಾಗಿದೆ. ಸಾಮಾನ್ಯ ಮಹಿಳೆಯಲ್ಲಿ 7 ಸದಸ್ಯರಿದ್ದರೆ, ಎಸ್.ಸಿ ಮಹಿಳೆಯ ಇಬ್ಬರಿದ್ದಾರೆ.

ಬೇನಾಳ ಆರ್.ಸಿ: ಒಟ್ಟು 12 ಸದಸ್ಯರಿದ್ದು, ಅಧ್ಯಕ್ಷ ಸ್ಥಾನ ಹಿಂದುಳಿದ ‘ಅ’ ವರ್ಗ, ಉಪಾಧ್ಯಕ್ಷ ಸ್ಥಾನ ಎಸ್.ಸಿ ಮೀಸಲಾಗಿದೆ. ಅ ವರ್ಗದಲ್ಲಿ ಇಬ್ಬರು ಮಹಿಳೆಯರಿದ್ದು ಎಸ್.ಸಿಯಲ್ಲಿ 6 ಮಹಿಳಾ ಸದಸ್ಯರಿದ್ದಾರೆ.

ಬಿರಲದಿನ್ನಿ ಗ್ರಾಪಂ: ಒಟ್ಟು 15 ಸದಸ್ಯರಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಎಸ್.ಸಿ ಮಹಿಳೆಗೆ ಮೀಸಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಎಲ್ಲ ಸದಸ್ಯರು ಸ್ಪರ್ಧಿಸಲು ಅವಕಾಶವಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ 3 ಮಹಿಳಾ ಸದಸ್ಯರು ಅರ್ಹತೆ ಪಡೆದಿದ್ದಾರೆ.

ಗೊಳಸಂಗಿ ಗ್ರಾಪಂ: ಒಟ್ಟು 18 ಸದಸ್ಯರಿದ್ದು, ಅಧ್ಯಕ್ಷ ಸ್ಥಾನ ಎಸ್.ಸಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ಮೀಸಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ 2 ಮಹಿಳಾ ಸದಸ್ಯರು ಅರ್ಹರಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಎಲ್ಲರೂ ಅರ್ಹರಾಗಿದ್ದಾರೆ.

ಇಟಗಿ ಗ್ರಾಪಂ: ಇಲ್ಲಿ ಒಟ್ಟು 26 ಸದಸ್ಯರಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಅಧ್ಯಕ್ಷ ಸ್ಥಾನದಲ್ಲಿ 13 ಮಹಿಳಾ ಸದಸ್ಯರು ಅರ್ಹರಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಎಲ್ಲರೂ ಅರ್ಹರಿದ್ದಾರೆ.

ಚಿಮ್ಮಲಗಿ ಗ್ರಾಪಂ: ಒಟ್ಟು 14 ಸದಸ್ಯರಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಎಲ್ಲರೂ ಅರ್ಹತೆ ಹೊಂದಿದ್ದರೆ ಉಪಾಧ್ಯಕ್ಷ ಸ್ಥಾನಕ್ಕೆ 7 ಮಹಿಳಾ ಸದಸ್ಯರು ಅರ್ಹತೆ ಹೊಂದಿದ್ದಾರೆ.

ವಂದಾಲ ಗ್ರಾಪಂ: ಒಟ್ಟು 19 ಸದಸ್ಯರಿದ್ದು, ಅಧ್ಯಕ್ಷ ಸ್ಥಾನ ಎಸ್.ಟಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯಗೆ ಮೀಸಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಓರ್ವ ಮಹಿಳೆ ಮಾತ್ರ ಇದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಎಲ್ಲರೂ ಅರ್ಹತೆ ಹೊಂದಿದ್ದಾರೆ.

ಆಲಮಟ್ಟಿ ಗ್ರಾಪಂ: ಇಲ್ಲಿ ಒಟ್ಟು 27 ಸದಸ್ಯರಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಎಲ್ಲರೂ ಅರ್ಹತೆ ಹೊಂದಿದ್ದರೆ ಉಪಾಧ್ಯಕ್ಷ ಸ್ಥಾನದಲ್ಲಿ 14 ಜನ ಮಹಿಳಾ ಸದಸ್ಯರಿದ್ದಾರೆ.