ಪಿರಿಯಾಪಟ್ಟಣ : ಬಿಜೆಪಿ ಜತೆಗಿನ ಮೈತ್ರಿಯಿಂದ ಜೆಡಿಎಸ್ ಪಕ್ಷಕ್ಕೆ ಅನುಕೂಲಕರವಾದ ವಾತಾವರಣ ನಿರ್ಮಾಣವಾಗಿದೆ ಎಂದು ಮಾಜಿ ಶಾಸಕ ಕೆ.ಮಹದೇವ್ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ಮಂಜುನಾಥ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕಿನ ಜೆಡಿಎಸ್ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ಬಿಜೆಪಿ ಮತ್ತು ಜೆಡಿಎಸ್ ಒಗ್ಗಟ್ಟಿನಿಂದ ವಿರೋಧಿಸುವ ಮೂಲಕ ಸಾರ್ವಜನಿಕರಿಗೆ ನ್ಯಾಯ ಒದಗಿಸುತ್ತಿದ್ದೇವೆ ಎಂದರು.
ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವವರೆಗೂ ನಾವು ವಿರಮಿಸುವುದಿಲ್ಲ. ಜೆಡಿಎಸ್ ಅನ್ನು ಬೂತ್ ಮಟ್ಟದಲ್ಲಿ ಸದೃಢಗೊಳಿಸುವುದು ಈ ಸಭೆಯ ಮುಖ್ಯ ಉದ್ದೇಶವಾಗಿದೆ. ಬೂತ್ ಕಮಿಟಿಗಳನ್ನು ರಚಿಸುವ ಸಂದರ್ಭದಲ್ಲಿ ಎಲ್ಲ ಸಮುದಾಯಕ್ಕೂ ಸಮಾನ ಅವಕಾಶ ನೀಡಲಾಗುವುದು. ರಾಜ್ಯದಲ್ಲಿ ಆಡಳಿತದಲ್ಲಿರುವ ಜನಪ್ರತಿನಿಧಿಗಳಿಂದ ನ್ಯಾಯಯುತ ಕರ್ತವ್ಯ ಬಾರದಿದ್ದಲ್ಲಿ ಅವರ ವಿರುದ್ಧ ಹೋರಾಟ ಮಾಡಲು ನಾವೆಲ್ಲರೂ ಸಜ್ಜಾಗಬೇಕಿದೆ ಎಂದರು.
ನಾನು ಶಾಸಕನಾಗಿದ್ದ ಅವಧಿಯಲ್ಲಿ ತಾಲೂಕಿನ ಎಲ್ಲ ಗ್ರಾಮಗಳಿಗೂ ಸಮರ್ಪಕವಾಗಿ ಮೂಲ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಆದರೆ ಮತದಾರರು ಎರಡನೇ ಅವಧಿಗೆ ನನ್ನ ಕೈ ಹಿಡಿಯಲಿಲ್ಲ. ತಾಲೂಕಿನಲ್ಲಿ ಜೆಡಿಎಸ್ ಪಕ್ಷವನ್ನು ಸದೃಢಗೊಳಿಸಬೇಕು ಎಂಬ ಇರಾದೆಯೊಂದಿಗೆ ಪ್ರತಿ ಗ್ರಾಮದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಮಾಡಬೇಕಿದ್ದು, ನನ್ನಿಂದ ಯಾವುದೇ ರೀತಿಯ ಲೋಪವಾಗಿದ್ದಲ್ಲಿ ನೇರವಾಗಿ ತಿಳಿಸಿ ಎಂದರು.
ಸಭೆಯಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಕಾರ್ಯಕರ್ತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಮುಖಂಡರಾದ ಎಚ್.ಡಿ.ರಾಜೇಂದ್ರ, ಚಂದ್ರಶೇಖರಯ್ಯ, ಮೈಲಾರಪ್ಪ, ಪ್ರೀತಿ ಅರಸ್, ಎಸ್.ರಾಮು, ಶಿವಣ್ಣ, ಜೆ.ಎಸ್.ನಾಗರಾಜ್, ಡಿ.ಎ.ನಾಗೇಂದ್ರ, ಜವರಪ್ಪ, ವೆಂಕಟೇಶ್, ಕೆ.ಮಹೇಶ್, ವಿದ್ಯಾದರ, ಪಿ.ಎನ್.ವಿನೋದ್, ಕೆ.ಕುಮಾರ್, ಚಿನ್ನಸ್ವಾಮಿ ಇತರರು ಇದ್ದರು.